Wednesday, October 22, 2025

Latest Posts

ನನಗೇನಾದರೂ ಆದರೆ ಖರ್ಗೆ ಕುಟುಂಬವೇ ಹೊಣೆ: ಛಲವಾದಿ ನಾರಾಯಣಸ್ವಾಮಿ!

- Advertisement -

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಮೇಲಿನ ಬೆಂಗಾವಲು ಭದ್ರತೆಯನ್ನ ಸರ್ಕಾರ ಹಿಂತೆಗೆದುಕೊಂಡಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೇನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದದು ಎಂದು ಅವರು ಎಚ್ಚರಿಸಿದ್ದಾರೆ.

ನನ್ನ ಬೆಂಗಾವಲು ರಕ್ಷಕರನ್ನ ತೆರವುಗೊಳಿಸಿರುವುದು ಸರ್ಕಾರ ನನ್ನನ್ನು ಟಾರ್ಗೆಟ್ ಮಾಡುತ್ತಿರುವ ಸ್ಪಷ್ಟ ಸೂಚನೆ. ನಾನು ಸರ್ಕಾರದ ನ್ಯೂನತೆ, ಭ್ರಷ್ಟಾಚಾರ ಮತ್ತು ಆಡಳಿತದ ದೌರ್ಬಲ್ಯವನ್ನು ಬಹಿರಂಗಗೊಳಿಸುತ್ತಿರುವುದೇ ಈ ಕ್ರಮಕ್ಕೆ ಕಾರಣ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮನೆಗೆ 3 ಜನ ಬೆಂಗಾವಲು ರಕ್ಷಕರನ್ನು ನೀಡಿದ್ದರು. ಇದು ನಮಗೆ ಕೊಡಬೇಕಾದ ಭದ್ರತೆ ಎಂದು ನುಡಿದರು. ವಾಪಸ್ ಪಡೆಯುವ ಆದೇಶದ ಹಿಂದೆ ಪ್ರಿಯಾಂಕ್ ಖರ್ಗೆ, ಎಲ್ಲರೂ ಇದ್ದಾರೆ ಎಂದು ದೂರಿದರು.

ದಲಿತ ವಿಷಯದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ ನಾರಾಯಣಸ್ವಾಮಿ, ನಾವು ದಲಿತ ಸಂಘರ್ಷ ಸಮಿತಿಯಲ್ಲಿ ಹೋರಾಟ ಮಾಡಿ ಬಂದವರು. ನೀವು ಚಿನ್ನದ ಸ್ಪೂನ್ ಇಟ್ಟು ಹುಟ್ಟಿದವರು. ದಲಿತತ್ವವೇ ಗೊತ್ತಿಲ್ಲ. ನೀವು ದಲಿತರ ಬಗ್ಗೆ ಮೊಸಳೆಕಣ್ಣೀರು ಹಾಕುವುದು ಬೇಕಿಲ್ಲ ಎಂದು ಗಂಭೀರ ಟೀಕೆ ಮಾಡಿದರು.

ಬೆಂಗಾವಲು ರಕ್ಷಕರನ್ನು ವಾಪಸ್ ಪಡೆಯಲು ಯಾರು ಕಾರಣರೆಂದು ಮುಖ್ಯಮಂತ್ರಿ, ಗೃಹ ಸಚಿವರು ಉತ್ತರಿಸಬೇಕು. ಇಲ್ಲವಾದರೆ ನನಗೆ ಕೊಟ್ಟ ಕಾರು ಮತ್ತಿತರ ಸೌಲಭ್ಯವನ್ನು ವಾಪಸ್ ಕೊಡುವೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ಉಳಿದ ಅಂಗರಕ್ಷಕರನ್ನೂ ವಾಪಸ್ ಕಳಿಸುವೆ. ನನಗೆ ಯಾವ ರಕ್ಷಣೆಯೂ ಬೇಕಿಲ್ಲ. ನನಗೇನೇ ಆದರೂ ಖರ್ಗೆ ಕುಟುಂಬ ಮತ್ತು ಈ ಸರಕಾರವೇ ಕಾರಣ ಎಂದು ಎಚ್ಚರಿಸಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss