Friday, July 11, 2025

Latest Posts

ಶುರುವಾಯ್ತು ನಂಬರ್ ಗೇಮ್!‌ : ಸಿದ್ದು ಒನ್‌, ಡಿಕೆ ಟೂ : ಏನಿದು ಹೊಸ ರಾಜಕೀಯ ಲೆಕ್ಕಾಚಾರ..?

- Advertisement -

ಬೆಂಗಳೂರು : ರಾಜ್ಯದಲ್ಲಿ ಐದು ವರ್ಷಗಳ ಕಾಲ ನಾನೆ ಸಿಎಂ ಆಗಿ ಮುಂದುವರೆಯುತ್ತೇನೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಲವು ಬಾರಿ ಪುನರುಚ್ಚರಿಸಿದ್ದಾರೆ. ಆದರೆ ಗಮನಾರ್ಹ ಸಂಗತಿಯೆಂದರೆ ದೆಹಲಿಗೆ ತೆರಳಿದ್ದ ವೇಳೆ ಅದೂ ಕೂಡ ವರಿಷ್ಠರ ಭೇಟಿಗೂ ಮುನ್ನ ನೀಡಿರುವ ಹೇಳಿಕೆಯು ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳೆ ಎಬ್ಬಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ, ತಮಗೆ ಹೆಚ್ಚಿನ ಶಾಸಕರ ಬೆಂಬಲವಿದೆ, ಡಿಕೆ ಶಿವಕುಮಾರ್‌ ಅವರಿಗೆ ಕಡಿಮೆ ಶಾಸಕರು ಸಪೋರ್ಟ್‌ ಮಾಡಿದ್ದಾರೆ ಎಂದು ನೀಡಿರುವ ಹೇಳಿಕೆಯು ಕೈ ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಇನ್ನೂ ದೆಹಲಿಯಲ್ಲಿ ನಡೆದಿರುವ ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯದಲ್ಲಿ ನಂಬರ್‌ ಗೇಮ್‌ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರೂ ನಾಯಕರಿಗೆ ಎಷ್ಟು ಜನ ಶಾಸಕರು ಹಾಗೂ ಸಚಿವರ ಬೆಂಬಲವಿದೆ ಎಂಬ ಚರ್ಚೆಗಳು ಜೋರಾಗಿವೆ. ಯಾವ ಎಂಎಲ್‌ಎ ಯಾವ ನಾಯಕನ ಪರವಾಗಿದ್ದಾರೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಈ ನಡುವೆಯೇ ಒಬ್ಬೊಬ್ಬ ನಾಯಕರ ಬೆಂಬಲಕ್ಕೆ ಎಷ್ಟು ಜನ ಶಾಸಕರಿದ್ದಾರೆ ಎಂಬ ಕುರಿತು ಮಹತ್ವದ ಅಂಕಿ-ಅಂಶಗಳು ಲಭ್ಯವಾಗಿವೆ.

ಯಾರ ಬಣದಲ್ಲಿ ಯಾರ್ಯಾರು?

ಸಿದ್ದರಾಮಯ್ಯ ಬಣ
59 ಶಾಸಕರು
18 ಸಚಿವರು

ಡಿಕೆ ಶಿವಕುಮಾರ್‌ ಬಣ
31 ಶಾಸಕರು
6 ಸಚಿವರು

ತಟಸ್ಥ ಬಣ
13 ಶಾಸಕರು
8 ಸಚಿವರು

ಅದರಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ 59 ಶಾಸಕರು ಹಾಗೂ 18 ಸಚಿವರು ಇರುವ ಕುರಿತು ಮಾಹಿತಿ ಹೊರಬಿದ್ದಿದೆ. ಇನ್ನೂ ಡಿಕೆ ಶಿವಕುಮಾರ್‌ ಬಣದಲ್ಲಿ 31 ಶಾಸಕರು ಹಾಗೂ 6 ಸಚಿವರು ಗುರುತಿಸಿಕೊಂಡಿದ್ದಾರೆ. ಉಳಿದಂತೆ ತಟಸ್ಥ ಬಣದಲ್ಲಿ 13 ಶಾಸಕರು ಹಾಗೂ 8 ಜನ ಸಚಿವರಿದ್ದಾರೆ ಎನ್ನುವುದು ಪ್ರಮುಖ ಮಾಹಿತಿಯಾಗಿದೆ.

ಅಲ್ಲದೆ ಈ ಅಂಕಿ- ಸಂಖ್ಯೆಗಳನ್ನು ಗಮನಿಸಿದಾಗ ಬಹುತೇಕ ಶಾಸಕರು ಹಾಗೂ ಸಚಿವರ ಒಲವು ಸಿಎಂ ಸಿದ್ದರಾಮಯ್ಯ ಪರ ಇರುವುದು ಕಂಡು ಬರುತ್ತಿದೆ. ಅದರಂತೆ ಡಿಕೆ ಶಿವಕುಮಾರ್‌ ಅವರಿಗೆ ಅಲ್ಪ ಶಾಸಕರು ಮತ್ತು ಮಂತ್ರಿಗಳ ಸಪೋರ್ಟ್‌ ಇರುವುದು ತಿಳಿದು ಬರುತ್ತಿದೆ. ಆದರೆ ಈ ಎಲ್ಲ ಸಂಖ್ಯೆಗಳನ್ನು, ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಅಷ್ಟು ಸುಲಭವಾಗಿ ಸಿದ್ದರಾಮಯ್ಯ ಪಟ್ಟ ಬಿಟ್ಟುಕೊಡಲು ಸುತಾರಾಂ ಒಪ್ಪಿಗೆ ಸೂಚಿಸುವುದಿಲ್ಲ. ಹೀಗಾಗಿ ನಂಬರ್‌ ಗೇಮ್‌ನಲ್ಲೂ ಡಿಕೆ ಶಿವಕುಮಾರ್‌ ಹಿಂದೆ ಬಿದ್ದಿರುವುದರಿಂದ ಅವರು ಇನ್ಯಾವ ತಂತ್ರಗಾರಿಕೆ ಹೂಡುತ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.

- Advertisement -

Latest Posts

Don't Miss