ಬೀದರ್ ಜಿಲ್ಲೆಯ ಪೌರಾಡಳಿತ ಇಲಾಖೆಯ ಕಾರ್ಯವೈಖರಿ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಹುಟ್ಟುವುದಕ್ಕೂ ಹಣ ಕೊಡ್ಬೇಕು. ಸಾಯುವುದಕ್ಕೂ ಹಣ ಕೊಡ್ಬೇಕು ಅಂದ್ರೆ ಜನ ಸಾಮಾನ್ಯರು ಏನು ಮಾಡಬೇಕು? ಅನ್ನೋ ಪ್ರಶ್ನೆ ಬೀದರ್‌ನ ಬೀದಿಗಳಲ್ಲಿ ಕೇಳಿಬರುತ್ತಿದೆ. ಯಾಕಂದ್ರೆ ಬೀದರ್ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಹೊಸ ಅಧ್ಯಾಯ ಬೆಳಕಿಗೆ ಬಂದಿದೆ. ಒಂದು ಹುಟ್ಟಿನ ದಾಖಲೆ ಪಡೆಯಲು, ಅಥವಾ ಒಬ್ಬರ ಸಾವಿನ ದೃಢೀಕರಣ ಪತ್ರ ಪಡೆಯೋಕೆ ಅಧಿಕಾರಿಗಳಿಗೆ ಸಂಬಳದ ಜೊತೆಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ.
ಬೀದರ್ ನಲ್ಲಿ ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ನಾಗರಿಕರಿಂದ ₹50ರಿಂದ ₹200ರವರೆಗೆ ಲಂಚ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಧಾರಣ ಬಡಜನರಿಗೆ ಸರ್ಕಾರವೇ ಉಚಿತವಾಗಿ ನೀಡಬೇಕಾದ ಈ ಸೇವೆಗಳಿಗೂ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ದುಡ್ಡು ಕೊಟ್ಟರೆ ಮಾತ್ರ ಪ್ರಮಾಣ ಪತ್ರ ಸಿಗುತ್ತದೆ. ಇಲ್ಲದಿದ್ದರೆ ಫೈಲ್ ಕೂಡ ಮುಂದೆ ಸಾಗುವುದಿಲ್ಲ ಎಂಬ ರೀತಿಯಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ.
ಈ ಎಲ್ಲ ಪೌರಾಡಳಿತ ಸಚಿವ ರಹೀಂ ಖಾನ್ ಅವರ ತವರು ಬೀದರ್‌ನಲ್ಲೇ ನಡೆಯುತ್ತಿದೆ ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರ ಹಿತಕ್ಕಾಗಿ ಕೆಲಸ ಮಾಡಬೇಕಾದ ಮಂಗಲಾ ಶೆಟ್ಕರ್ ಸೇರಿದಂತೆ ಕೆಲ ಅಧಿಕಾರಿಗಳ ಮೇಲೆ ಲಂಚ ಸ್ವೀಕರಿಸುವ ಆರೋಪಗಳು ಗಂಭೀರವಾಗಿವೆ.
ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯವರು ಎಲ್ಲಿ? ಸಚಿವರ ತವರು ಜಿಲ್ಲೆಯಲ್ಲಿ ಜನರಿಗೆ ನ್ಯಾಯ ಸಿಗದಿದ್ದರೆ, ಬೇರೆ ಕಡೆ ಪರಿಸ್ಥಿತಿ ಏನು? ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರಾ ? ಅಂತ ಈಗ ಜನರು ಪ್ರಶ್ನಿಸುತ್ತಿದ್ದಾರೆ. ಸದ್ಯ ಜನರ ಕಣ್ಣು ಈಗ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳತ್ತ ನೆಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಗಂಭೀರ ಕ್ರಮಗಳನ್ನ ಅಧಿಕಾರಿಗಳು ಕೈಗೊಳ್ಳುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ : ಲಾವಣ್ಯ ಅನಿಗೋಳ




