Web News: ನೀವು ಶ್ರೀಮಂತರಾಗಬೇಕು ಎಂದಿದ್ದೀರಿ ಎಂದಾದರೆ, ನೀವು ಇಂದಿನಿಂದಲೇ ಕೆಲವು ಚಟಗಳನ್ನು ನಿಯಂತ್ರಿಸಬೇಕು. ಈ ಕೆಲಸ ನೀವು ಮಾಡಿದ್ದೇ ಆದಲ್ಲಿ, ತಕ್ಕ ಮಟ್ಟಿಗಾದರೂ ನೀವು ಶ್ರೀಮಂತರಾಗುತ್ತೀರಿ.
ಪ್ರತಿದಿನ ಆಚೆ ಆಹಾರ ಸೇವನೆ ಮಾಡುವುದು: ಕೆಲವರು ನೆಪ ಹೇಳಿ ಪ್ರತಿದಿನ ಆಚೆ ಆಹಾರ ಸೇವಿಸುತ್ತಾರೆ. ಕೆಲವರಿಗೆ ಅನಿವಾರ್ಯತೆ ಇರುತ್ತದೆ. ಹಾಗಾಗಿ ಆಚೆ ಆಹಾರ ಸೇವಿಸಲೇಬೇಕು. ಆದರೆ ನಿಮಗೆ ಆ ಅನಿವಾರ್ಯತೆ ಇಲ್ಲ. ಮನೆ ಇದೆ, ಅಡುಗೆ ಮಾಡಲು ಬರತ್ತೆ ಎಂದಾದಲ್ಲಿ, ನೀವು ಆಚೆ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು. ಇದರಿಂದ ನಿಮ್ಮ ಹಣ ಉಳಿತಾಯವಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲಿಗೆ ಭವಿಷ್ಯದಲ್ಲಿ ಅನಾರೋಗ್ಯಕ್ಕೆ ಹಣ ಖರ್ಚು ಮಾಡುವ ಅವಶ್ಯಕತೆಯೂ ಇರೋದಿಲ್ಲ.
ಕೆಟ್ಟ ಅಭ್ಯಾಸ: ಇನ್ನು 2ನೇಯದಾಗಿ ಕೆಟ್ಟ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಮದ್ಯಪಾನ, ಧೂಮಪಾನ ಸೇವನೆ, ಇದರ ಜತೆ ಬೇರೆ ಬೇರೆ ಅಭ್ಯಾಸಗಳು ಇದ್ದು, ಅವು ನಿಮ್ಮ ಜೀವನಕ್ಕೆ ಮಾರಕ ಎನ್ನಿಸಿದ್ದಲ್ಲಿ, ಅಂಥ ಅಭ್ಯಾಸಗಳನ್ನು ತ್ಯಜಿಸಿ. ಇದರಿಂದ ನಿಮ್ಮ ಆರೋಗ್ಯ- ಹಣ ಎಲ್ಲವೂ ಉಳಿಯುತ್ತದೆ.
ಇಎಂಐಯಲ್ಲಿ ವಸ್ತು ಖರೀದಿಸುವುದು: ಇಎಂಐ ಅನ್ನೋದು 1 ಟ್ರ್ಯಾಪ್ ಅಂತಾರೆ ಅನುಭವಸ್ಥರು. 1 ಸಲ ಇಎಂಐ ಚಟ ಬಿದ್ದರೆ, ಬೇಕಾಗಿದ್ದೆಲ್ಲ ಇಎಂಐನಲ್ಲೇ ಖರೀದಿಸುವ ಆಸೆಯಾಗುತ್ತದೆ. ಅದರಲ್ಲೂ ನೀವು ಸೆಲ್ ಫೋನ್ ಸೇರಿ ಶೋಕಿ ವಸ್ತುಗಳನ್ನು ಇಎಂಐನಲ್ಲಿ ಖರೀದಿಸುವುದಾದರೆ, ಅದು ಹಣವನ್ನು ವ್ಯಯಿಸುವ ವಿಧಾನ. ಆದರೆ ನೀವು ಅತ್ಯವಶ್ಯಕ ವಸ್ತುಗಳನ್ನು ಮಾತ್ರ ಇಎಂಐನಲ್ಲಿ ಖರೀದಿಸಬಹುದು.
ಬ್ರ್ಯಾಂಡೆಡ್ ವಸ್ತ್ರ ಧರಿಸುವುದು: ಯಾರನ್ನೋ ಮೆಚ್ಚಿಸಲು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಲು ನೀವು ಬ್ರ್ಯಾಂಡೆಡ್ ಉಡುಪು ಧರಿಸುತ್ತಿದ್ದರೆ, ಖಂಡಿತ ಇದು ತಪ್ಪು ನಿರ್ಧಾರ. ಇದಕ್ಕೆ ನೀವು ಹಣ ಸುರಿಯುವ ಬದಲು, ಹೂಡಿಕೆ ಮಾಡಿ.
ಕಡಿಮೆ ಸಂಬಳವಿದ್ದರೂ ಜೀವನವನ್ನು ಅಪ್‌ಗ್ರೇಡ್ ಮಾಡುವುದು: ನಿಮಗೆ ಕಳೆದ ವರ್ಷದ ಸಂಬಳವೇ ಈ ವರ್ಷವಿದ್ದರೂ, ನೀವು ನಿಮ್ಮ ಖರ್ಚಿನ ವೆಚ್ಚ ಹೆಚ್ಚು ಮಾಡಿದ್ದರೆ, ನೀವು ಭವಿಷ್ಯದಲ್ಲಿ ಹಣ ಕಾಸಿನ ಸಮಸ್ಯೆ ಅನುಭವಿಸಲಿದ್ದೀರಿ ಎಂದರ್ಥ. ಹಾಗಾಗಿ ಹಣ ಉಳಿತಾಯ, ಹೂಡಿಕೆಯ ಬಳಿಕ ಖರ್ಚಿನ ಕಡೆ ಗಮನ ನೀಡಿ.
ತಿಂಗಳ ಖರ್ಚಿನ ಬಗ್ಗೆ ಗಮನವಿಲ್ಲದಿರುವುದು: ಪ್ರತೀ ತಿಂಗಳು ಯಾವ ಯಾವುದಕ್ಕಾಗಿ ಖರ್ಚು ಮಾಡಿದ್ದೀರಿ. ಯಾಕೆ ಖರ್ಚು ಮಾಡಿದ್ದೀರಿ..? ಅವಶ್ಯಕತೆ ಇರುವುದಕ್ಕೆ ಎಷ್ಟು ಖರ್ಚು ಮಾಡಿದ್ದೀರಿ.? ಅನವಶ್ಯಕ ಖರ್ಚು ಎಷ್ಟಾಗಿದೆ..? ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ, ಅನವಶ್ಯಕ ಖರ್ಚು ಕಡಿಮೆ ಮಾಡಿ. ಈ ಲೆಕ್ಕವಿದ್ದಲ್ಲಿ, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅತೀಯಾಗಿ ನಂಬಿ ಹಣ ವ್ಯಯಿಸುವುದು: ನಿಮ್ಮ ಸಂಬಂಧಿಕರಿಗಾಗಿ, ನಿಮ್ಮ ಸ್ನೇಹಿತರಿಗಾಗಿ, ಗೆಳತಿಗಾಗಿ ಹೆಚ್ಚಿನ ಹಣ ವ್ಯಯಿಸಿದರೆ ಅದರಿಂದ ನಿಮಗೇನೂ ಉಪಯೋಗವಾಗುವುದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ನೀವು ಹಣ ನೀಡಬಹುದು. ಅದನ್ನು ಬಿಟ್ಟು ಎಂಜಾಯ್ ಮಾಡಲು ನೀವು ಯಾರಿಗಾದರೂ ಸುಮ್ಮನೆ ಹಣ ಖರ್ಚು ಮಾಡಿದ್ರೆ, ಅದು ಭವಿಷ್ಯದಲ್ಲಿ ನೀವು ಆರ್ಥಿಕ ಸಮಸ್ಯೆ ಎದುರಿಸುವ ಸೂಚನೆಯಾಗಿರುತ್ತದೆ.




