ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹಾಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾಗಿ, ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಸಾಧ್ಯತೆ ಇದೆ. ಈ ಕುರಿತು ಆಗಸ್ಟ್ 12ರಂದು ಮಹತ್ವದ ಸಭೆ ಕರೆಯಲಾಗಿದೆ.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅಧ್ಯಕ್ಷತೆಯಲ್ಲಿ, ಸಭೆ ನಡೆಯಲಿದೆ. ಆಗಸ್ಟ್ 12ರ ಸಂಜೆ ವಿಧಾನಸೌಧದಲ್ಲಿ ಮೀಟಿಂಗ್ ನಿಗದಿಪಡಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಒಪಿಎಸ್ ಜಾರಿ ಮಾಡಲಾಗಿದೆ. ಹೀಗಾಗಿ ಸರ್ಕಾರದ ಕಾರ್ಯದರ್ಶಿ ರಮಣ್ ದೀಪ್ ನೇತೃತ್ವದ ಸಮಿತಿ, ಹಿಮಾಚಲಕ್ಕೂ ಭೇಟಿ ಕೊಟ್ಟಿತ್ತು. ಅಲ್ಲಿ ಒಪಿಎಸ್‌ಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳನ್ನು ಕಲೆ ಹಾಕಿದ್ದು, ಸಿದ್ದಪಡಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇನ್ನು, ಕಾರ್ಯದರ್ಶಿ ತುಳಸಿ ಮದ್ದಿನೇನಿ ಕೂಡ, ಆಂಧ್ರಪ್ರದೇಶಕ್ಕೆ ಭೇಟಿ ಕೊಟ್ಟು, ಮತ್ತೊಂದು ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯನ್ನೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಎರಡೂ ವರದಿಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಬಳಿಕ ಒಪಿಎಸ್ ಜಾರಿ ಬಗ್ಗೆ ಮಹತ್ವದ ಆದೇಶ ಬರುವ ಸಾಧ್ಯತೆ ಇದೆ.