Thursday, November 13, 2025

Latest Posts

ರಾಜ್ಯಾದ್ಯಂತ ಖಾಕಿ ಪಡೆ ಹೈಅಲರ್ಟ್‌

- Advertisement -

ದೆಹಲಿಯಲ್ಲಿ ಸ್ಫೋಟ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಖಾಕಿಪಡೆ ಕಟ್ಟೆಚ್ಚರ ವಹಿಸಿದೆ. ನಾಕಾಬಂದಿ ಹಾಕಿ ಪೊಲೀಸರು, ವಾಹನಗಳ ತಪಾಸಣೆ ನಡೆಸಿದ್ದಾರೆ. ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಸಿನಿಮಾ ಮಂದಿರ, ಮಾಲ್‌ಗಳು, ದೇವಾಲಯಗಳು, ವಿಮಾನ ನಿಲ್ದಾಣ, ಮೆಟ್ರೋ ಸ್ಟೇಷನ್​​ ಸೇರಿದಂತೆ ನಗರದೆಲ್ಲೆಡೆ ತಪಾಸಣೆ ಹಾಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಲ್ಲಾ ಜನನಿಬಿಡ ಜಾಗಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 

ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿದ್ದು, ಅನುಮಾನಾಸ್ಪದ ವಾಹನಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ಡಿಸಿಪಿಗಳೇ ಖುದ್ದು ಫೀಲ್ಡ್‌ಗೆ ಇಳಿದು ಪರಿಶೀಲನೆ ನಡೆಸಿದ್ದಾರೆ. ಪ್ರತಿ ವಿಭಾಗದ ಮುಖ್ಯ ರಸ್ತೆಗಳಲ್ಲಿ ಪೊಲೀಸರಿಂದ ತಪಾಸಣೆ ನಡೆದಿದ್ದು, ಲಾಡ್ಜ್ ಹಾಗೂ ಹೋಟೆಲ್‌ಗಳ ಮೇಲೂ ನಿಗಾ ವಹಿಸಲಾಗಿದೆ.

ದೆಹಲಿ ಸ್ಪೋಟದ ಬಳಿಕ ನಗರದಲ್ಲಿ ಪೊಲೀಸ್‌ ಕಮಿಷನರ್​ ಬಿಗ್​ ಅಲರ್ಟ್ ಘೋಷಿಸಿದ್ದಾರೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಮೆಟ್ರೋ ಸ್ಟೇಷನ್ಸ್ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಅಯಾ ವಿಭಾಗಗಳಲ್ಲಿ ಡಿಸಿಪಿಗಳೇ ಪರಿಶೀಲನೆಗೆ ಮುಂದಾಗಿದ್ದಾರೆ. ಕಟ್ಟುನಿಟ್ಟಿನ ನಿಗಾ ಹಾಗೂ 24 ಗಂಟೆಗಳ ಮೇಲ್ವಿಚಾರಣೆ ವಹಿಸಲು ಸೂಚಿಸಿದ್ದಾರೆ.

ಬೆಂಗಳೂರು ನಗರ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆದಿದೆ. ಒಳ ಬರುವ, ಹೊರ ಹೋಗುವ ರಸ್ತೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಪ್ರತಿಯೊಂದು ವಾಹನಗಳನ್ನ ತಪಾಸಣೆ ನಡೆಸಿ, ಎಂಟ್ರಿ ಮಾಡಲು ಸೂಚಿಸಿದ್ದಾರೆ. ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಲು ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಶಾನ್ಯ ವಿಭಾಗ ಡಿಸಿಪಿ ಸಜೀತ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ. ಭದ್ರತೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಶ್ವಾನದಳದ ಮೂಲಕ ತಪಾಸಣೆ ಮಾಡಲಾಗ್ತಿದೆ.

ಮೆಟ್ರೋ ಸ್ಟೇಷನ್‌ಗಳಲ್ಲೂ ಈಗಾಗಲೇ ಶ್ವಾನದಳದ ಸಮೇತ ಪೊಲೀಸರು ಅಖಾಡಕ್ಕೆ ಇಳಿದಿದ್ದಾರೆ. ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ, ಹೈಗ್ರೌಂಡ್ಸ್, ಟೌನ್ ಹಾಲ್, ಎಂಜಿ ರಸ್ತೆ ಸೇರಿದಂತೆ ಹಲವೆಡೆ ಪರಿಶೀಲನೆ ನಡೆದಿದೆ.

ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಭಾರೀ ಕಟ್ಟೆಚ್ಚರ ವಹಿಸುವಂತೆ, ಪೊಲೀಸ್‌ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.

- Advertisement -

Latest Posts

Don't Miss