ದೆಹಲಿ ಸ್ಪೋಟ ಬೆನ್ನಲ್ಲೇ ಕ್ಯಾಬಿನೆಟ್ ಕಮಿಟಿ ಸೆಕ್ಯೂರಿಟಿ ಮೀಟಿಂಗ್ ಕರೆಯಲಾಗಿದೆ. ಇಂದು ಸಂಜೆ 5.30ಕ್ಕೆ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಜೈಶಂಕರ್ ಮತ್ತು ಮೂರು ಪಡೆಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸದ್ಯ, ಪ್ರಧಾನಿ ನರೇಂದ್ರ ಮೋದಿ ಭೂತಾನ್ ಪ್ರವಾಸದಲ್ಲಿದ್ದು, ಇಂದು ವಾಪಸ್ ಆಗಲಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ಭದ್ರತಾ ಸಂಪುಟ ಸಮಿತಿ ಸಭೆ ಮಾಡಿ, ಬಳಿಕ ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ನಿನ್ನೆ ಭೂತಾನ್ ನೆಲದಲ್ಲೇ ನಿಂತು ಉಗ್ರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು. ಸ್ಫೋಟದ ಹಿಂದಿನ ಪಿತೂರಿದಾರರನ್ನ ಸುಮ್ಮನೆ ಬಿಡೋದಿಲ್ಲ ಎಂದು ವಾರ್ನ್ ಮಾಡಿದ್ರು. ವಿದೇಶ ಪ್ರವಾಸದಲ್ಲಿದ್ರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ನಿರಂತರ ಸಂಪರ್ಕದಲ್ಲಿದ್ರು. ಫೋನ್ ಮೂಲಕವೇ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ರು.
ಇನ್ನು, ದೆಹಲಿ ಸ್ಪೋಟದ ನಂತರ ಮೊದಲೇ ಉದ್ವಿಗ್ನತೆಯಿಂದ ಕೂಡಿದ್ದ, ಭಾರತ-ಪಾಕ್ ನಡುವಿನ ಬಿಗುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಸದ್ಯ, ಎರಡೂ ದೇಶಗಳ ನಡುವಿನ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಪಾಕಿಸ್ತಾನದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು ನೋಟಮ್ ಹೊರಡಿಸಲಾಗಿದೆ. ಅಂದ್ರೆ ನೋಟಿಸ್ ಆಫ್ ಏರ್‌ಮನ್ ಹೊರಡಿಸಿದ್ದು,
ಹೆಚ್ಚಿನ ಭದ್ರತಾ ನಿಯಮಗಳನ್ನು ಜಾರಿಗೆ ತರಲಾಗಿದೆ. ವಾಯುಪಡೆ ಮತ್ತು ನೌಕಾಪಡೆಗಳಿಗೆ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ, ಸೂಚನೆಯನ್ನು ನೀಡಲಾಗಿದೆಯಂತೆ. ರೆಡ್ ಹೈಅಲರ್ಟ್ ಸ್ಥಿತಿಯಲ್ಲಿರುವಂತೆ, ವಾಯುಪಡೆಗೆ ಪಾಕಿಸ್ತಾನ ಸರ್ಕಾರ ಸೂಚಿಸಿದೆ. ಕಂಡು ಕೇಳರಿಯದ ಭದ್ರತೆಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.

