ನವದೆಹಲಿ: ಬ್ರೂನೈ ಪ್ರವಾಸದ ಸಂದರ್ಭದಲ್ಲಿ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ (Brunei Sultan Haji Hassanal Bolkiah) ಅವರನ್ನು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಶಿಕ್ಷಣ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ, ಜನರ ನಡುವಿನ ವಿನಿಮಯ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಉಭಯ ದೇಶಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಫಿನ್‌ಟೆಕ್, ಸೈಬರ್ ಭದ್ರತೆ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ, ನವೀಕರಿಸಬಹುದಾದ ಶಕ್ತಿಯಂತಹ ಕ್ಷೇತ್ರಗಳಲ್ಲಿ ಅನ್ವೇಷಣೆ ಮತ್ತು ಸಹಯೋಗವನ್ನು ಮುಂದುವರೆಸಲು ಮೋದಿ ಹಾಗೂ ಸುಲ್ತಾನ್ ಹಾಜಿ ಒಪ್ಪಿಗೆ ನೀಡಿದ್ದಾರೆ. ಬ್ರೂನೈ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಜೊತೆಗಿನ ಸಭೆ ಬಳಿಕ ಮಾತ್ನಾಡಿದ ಪ್ರಧಾನಿ ಮೋದಿ ಶೀಘ್ರದಲ್ಲೇ ಉಭಯ ದೇಶಗಳ ನಡುವೆ ನೇರ ವಿಮಾನಯಾನ ಪ್ರಾರಂಭಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಉಭಯ ದೇಶಗಳ ನಾಯಕರು ಉಪಗ್ರಹ ಮತ್ತು ಉಡಾವಣಾ ವಾಹನಗಳಿಗಾಗಿ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಟೆಲಿಕಮಾಂಡ್ ನಿಲ್ದಾಣದ ಕಾರ್ಯಾಚರಣೆಯಲ್ಲಿ ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಇನ್ನು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಿರೋ ಪ್ರಧಾನಿ ಮೋದಿ ಮತ್ತು ಸುಲ್ತಾನ್ ಹಜಿ, ಭಯೋತ್ಪಾದನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಬ್ರೂನೈ ಸುಲ್ತಾನ್ ಹಾಜಿ ಹಸನಲ್ ಜೊತೆಗಿನ ಸಮಾಲೋಚನೆ ಬಗ್ಗೆ ಪ್ರಧಾನಿ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಪ್ರಸಕ್ತ ವರ್ಷ ಭಾರತ ಹಾಗೂ ಬ್ರೂನೈ ದೇಶಗಳು ದ್ವಿಪಕ್ಷೀಯ ಪಾಲುದಾರಿಕೆಯ 40ನೇ ವಾರ್ಷಿಕೋತ್ಸವವನ್ನ ಆಚರಿಸುತ್ತಿವೆ ಅನ್ನೋದು ಸಂತೋಷದ ವಿಷಯ. ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಇಂಡೋ-ಪೆಸಿಫಿಕ್ ವಿಷನ್‌ನಲ್ಲಿ ಬ್ರೂನೈ ಪ್ರಮುಖ ಪಾಲುದಾರ ದೇಶವಾಗಿರೋದು ನಮಗೆ ಉಜ್ವಲ ಭವಿಷ್ಯದ ಭರವಸೆಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Delighted to meet His Majesty Sultan Haji Hassanal Bolkiah. Our talks were wide ranging and included ways to further cement bilateral ties between our nations. We are going to further expand trade ties, commercial linkages and people-to-people exchanges. pic.twitter.com/CGsi3oVAT7
— Narendra Modi (@narendramodi) September 4, 2024