ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಮಿನ್ಸ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಇದಲ್ಲದೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎನಿಸಿಕೊಂಡರು.
ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಕಮಿನ್ಸ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಬಾಂಗ್ಲಾ ಇನಿಂಗ್ಸ್‌ನ 18ನೇ ಓವರ್‌ನ ಐದನೇ ಎಸೆತದಲ್ಲಿ ಮಹಮ್ಮದುಲ್ಲಾ ಅವರನ್ನು ಬೌಲ್ಡ್ ಮಾಡುವ ಮೂಲಕ ಪ್ಯಾಟ್ ಕಮಿನ್ಸ್ ಮೊದಲ ವಿಕೆಟ್ ಪಡೆದರು. ನಂತರದ ಎಸೆತದಲ್ಲಿ ಮೆಹದಿ ಹಸನ್ ಜಂಪಾಗೆ ಕ್ಯಾಚ್ ನೀಡಿ ಔಟಾದರು. 20ನೇ ಓವರ್‌ನ ಮೊದಲ ಎಸೆತದಲ್ಲಿ, ತೌಹೀದ್ ಹೃದಯ್ ಹ್ಯಾಝಲ್‌ವುಡ್‌ಗೆ ಕ್ಯಾಚ್ ನೀಡಿದರು, ಈ ಮೂಲಕ ವಿಶ್ವಕಪ್‌ನಲ್ಲಿ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ರೆಟ್ ಲೀ ಆಸ್ಟ್ರೇಲಿಯಾ ಪರ ಈ ಸಾಧನೆ ಮಾಡಿದ್ದರು. 2007ರಲ್ಲಿ ಕೇಪ್ಟೌನ್ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬ್ರೆಟ್ ಲೀ ಹ್ಯಾಟ್ರಿಕ್ ವಿಕೆಟ್ ಪಡೆದಿದ್ರು. 2021ರಲ್ಲಿ ಐರ್ಲೆಂಡ್‌ನ ವೇಗದ ಬೌಲರ್ ಕುರ್ಟಿಸ್ ಕ್ಯಾಂಪರ್ ಹಾಗೂ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಕೂಡ ಈ ಸಾಧನೆ ಮಾಡಿದ್ದಾರೆ. 2022ರಲ್ಲಿ ಯುಎಇಯ ಕಾರ್ತಿಕ್ ಮೇಯಪ್ಪನ್ ಮತ್ತು ಐರ್ಲೆಂಡ್‌ನ ಜೋಶುವಾ ಲಿಟಲ್ ಕೂಡ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಪ್ಯಾಟ್ ಕಮಿನ್ಸ್ ನಾಲ್ಕು ಓವರ್ ಗಳಲ್ಲಿ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಇದರೊಂದಿಗೆ ಆಸೀಸ್ ತಂಡಕ್ಕೆ ಗೆಲುವು ತಂದುಕೊಟ್ಟರು.
T20 ವಿಶ್ವಕಪ್: ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ಸಾಧನೆ
- Advertisement -
- Advertisement -