2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ 14ರಂದು ನಡೆದಿದೆ. ಟಾಸ್ ಸಮಯದಲ್ಲಿ ನಾಯಕ ಸೂರ್ಯ ಪಾಕ್ ನಾಯಕನೊಂದಿಗೆ ಕೈಕುಲುಕಲಿಲ್ಲ. ಪಂದ್ಯ ಮುಗಿದ ಬಳಿಕ ಭಾರತ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಇದು ಎರಡೂ ದೇಶಗಳ ನಡುವೆ ಬಿಸಿ ಚರ್ಚೆಗೆ ಕಾರಣವಾಯಿತು. ಈ ಘಟನೆಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿ, ಟೂರ್ನಿ ಬಹಿಷ್ಕಾರದ ಬೆದರಿಕೆ ನೀಡಿತ್ತು.
ಈ ಹಿಂದೆ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದೆ. ಪಾಕಿಸ್ತಾನ 127 ರನ್‌ಗಳಿಗೆ ಸೀಮಿತವಾಗಿದ್ದು, ಟೀಂ ಇಂಡಿಯಾ 15.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಈ ಜಯದಿಂದ ಭಾರತ ತಂಡ ಅಗ್ರ ಸ್ಥಾನ ಪಡೆದಿದೆ. ಭಾರತ ತಂಡ ಗುಂಪು ಹಂತದಲ್ಲಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಭಾರತ ತನ್ನ ಕೊನೆಯ ಲೀಗ್ ಪಂದ್ಯವನ್ನು ಓಮನ್ ವಿರುದ್ಧ ಆಡಬೇಕಿದೆ. ಆದರೆ ಓಮನ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವುದರಿಂದ, ಟೀಂ ಇಂಡಿಯಾ ಸ್ಫೂರ್ತಿಯಿಂದ ಮುಂದಿನ ಹಂತ ಪ್ರವೇಶಿಸುತ್ತಿದೆ. ಈಗಾಗಲೇ ಉಂಟಾದ ವಿವಾದ ಶಮನವಾಗುವ ಮುನ್ನವೇ, ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 21 ರಂದು ದುಬೈನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆದಿದ್ದು, ಈ ಪಂದ್ಯ ಮತ್ತೆ ದೊಡ್ಡ ಗಮನ ಸೆಳೆಯಲಿದೆ.