ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ಸ್ನೇಹಪೂರ್ಣ ಸಂಬಂಧವು ಸುಭದ್ರ ವ್ಯಾಪಾರ ಸಹಕಾರದಲ್ಲಿ ಪ್ರತಿಫಲಿಸುತ್ತಿದ್ದು, ಈ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲು ಎರಡೂ ರಾಷ್ಟ್ರಗಳು ಮುಂದಾಗಿವೆ.
ಈ ಸಂಬಂಧ ಎಂಜಿನಿಯರಿಂಗ್, ಔಷಧ, ಕೃಷಿ ಮತ್ತು ರಾಸಾಯನಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸುಮಾರು 300 ಉತ್ಪನ್ನಗಳನ್ನು ಭಾರತ ಗುರುತಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಕ್ರಮವು ಭಾರತೀಯ ರಫ್ತುದಾರರಿಗೆ ರಷ್ಯಾದ ಮಾರುಕಟ್ಟೆಯಲ್ಲಿ ತಮ್ಮ ಉಪಸ್ಥಿತಿಯನ್ನು ಗಮನಾರ್ಹವಾಗಿ ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ.
2030ರ ವೇಳೆಗೆ ಭಾರತ–ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಭಾರತ ಈ ಗುರುತಿಸಲಾದ ವರ್ಗದಲ್ಲಿ ಕೇವಲ 1.7 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಮಾತ್ರ ರಷ್ಯಾಕ್ಕೆ ರಫ್ತು ಮಾಡುತ್ತಿದೆ. ಆದರೆ ಇದೇ ವರ್ಗದಲ್ಲಿ ರಷ್ಯಾ ಇತರ ದೇಶಗಳಿಂದ ಒಟ್ಟು 37.4 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ವ್ಯಾಪಾರ ಅಂತರವು ಭಾರತೀಯ ರಫ್ತುದಾರರಿಗೆ ದೊಡ್ಡ ಅವಕಾಶವನ್ನೇ ಸೂಚಿಸುತ್ತದೆ.
ಈ ಉತ್ಪನ್ನಗಳ ಪೈಕಿ ಯಾವ ಕ್ಷೇತ್ರಗಳು ಪ್ರಮುಖ ರಫ್ತು ಗುರಿಯಾಗಲಿವೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಆದಾಗ್ಯೂ, ರಫ್ತು ಪ್ರಮಾಣ ಹೆಚ್ಚಾದಷ್ಟೂ ರಷ್ಯಾದೊಂದಿಗೆ ಇರುವ ಭಾರತದ ವ್ಯಾಪಾರ ಕೊರತೆ ಕಡಿಮೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಭಾರತ–ರಷ್ಯಾ ವ್ಯಾಪಾರ ಕೊರತೆ ಸುಮಾರು 59 ಬಿಲಿಯನ್ ಡಾಲರ್ ಆಗಿದೆ.
ರಷ್ಯಾದ ಆಮದು ಬೇಡಿಕೆಗೆ ತಕ್ಕಂತೆ ಭಾರತದ ಪೂರೈಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಾಣಿಜ್ಯ ಸಚಿವಾಲಯವು ಹಲವಾರು ಉನ್ನತ ಸಾಮರ್ಥ್ಯದ ಉತ್ಪನ್ನಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇವುಗಳಲ್ಲಿ ಎಂಜಿನಿಯರಿಂಗ್ ಸರಕುಗಳು, ಔಷಧಗಳು, ಕೃಷಿ ಉತ್ಪನ್ನಗಳು ಮತ್ತು ರಾಸಾಯನಿಕ ವಸ್ತುಗಳು ಸೇರಿವೆ. ಈ ಉತ್ಪನ್ನಗಳನ್ನು ರಷ್ಯಾ ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ.
ಪಿಟಿಐ ವರದಿ ಪ್ರಕಾರ, ರಷ್ಯಾದ ಒಟ್ಟು ಆಮದು ಬುಟ್ಟಿಯಲ್ಲಿ ಭಾರತದ ಪಾಲು ಸದ್ಯಕ್ಕೆ ಸುಮಾರು 2.3 ಶೇಕಡಾ ಮಾತ್ರ. ಆದರೆ ರಷ್ಯಾದಿಂದ ಭಾರತಕ್ಕೆ ಆಗುವ ಆಮದುಗಳು ಕಳೆದ ಕೆಲವು ವರ್ಷಗಳಲ್ಲಿ ತೀವ್ರವಾಗಿ ಹೆಚ್ಚಿವೆ. 2020ರಲ್ಲಿ 5.94 ಬಿಲಿಯನ್ ಡಾಲರ್ ಆಗಿದ್ದ ಆಮದು, 2024ರಲ್ಲಿ 64.24 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ಈ ಏರಿಕೆಗೆ ಪ್ರಮುಖ ಕಾರಣ ರಷ್ಯಾದಿಂದ ಭಾರತಕ್ಕೆ ಆಗುತ್ತಿರುವ ಕಚ್ಚಾ ತೈಲ ಆಮದು. 2020ರಲ್ಲಿ 2 ಬಿಲಿಯನ್ ಡಾಲರ್ ಆಗಿದ್ದ ಕಚ್ಚಾ ತೈಲ ಆಮದು, 2024ರಲ್ಲಿ 57 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಪ್ರಸ್ತುತ ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ರಷ್ಯಾದ ಪಾಲು ಸುಮಾರು 21 ಶೇಕಡಾ ಎಂದು ಅಂದಾಜಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ



