Shivamogga News : 1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಸೆಣಸಾಡಿದ್ದ ಟಿ -55 ಯುದ್ಧದ ಟ್ಯಾಂಕರ್ ಮಹಾರಾಷ್ಟ್ರದ ಪುಣೆ ಇಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಅದನ್ನು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಔಪಚಾರಿಕವಾಗಿ ಬರಮಾಡಿಕೊಳ್ಳಲಾಯಿತು.
ಇಷ್ಟು ದಿನ ಪೂನಾದಲ್ಲಿ ಸೇನೆಯ ಬಳಿಯಿದ್ದ ಯುದ್ಧ ಟ್ಯಾಂಕರ್ ಅನ್ನು ಲಾರಿಯಲ್ಲಿ ತರಿಸಲಾಗಿದೆ. ಅಲ್ಲಿಂದ ಲಾರಿಯಲ್ಲಿ ಬಂದ ಟ್ಯಾಂಕರ್ ಅನ್ನು ಅಲಂಕಾರ ಮಾಡಿ ನಗರದೊಳಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು. ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಾದ್ಯಗಳೊಂದಿಗೆ ಪುಷ್ಪ ಸುರಿಮಳೆ ಮಾಡಲಾಯಿತು. ಈ ವೇಳೆ ಭಾರತೀಯ ಸೇನೆಯಿಂದ ಪಡೆದ ಟ್ಯಾಂಕರ್ ಅನ್ನ ಮಾಜಿ ಸೈನಿಕರ ಸಂಘದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಯಿತು. ಟ್ಯಾಂಕರ್ ನೋಡಲು ಜನರ ಜಮಾವಣೆ ಆಗಿತ್ತು. ಈ ವೇಳೆ ಭಾರತ್ ಮಾತಾಕಿ ಜೈ ಘೋಷಣೆ ಮುಗಿಲು ಮುಟ್ಟಿತ್ತು. ಈ ಟ್ಯಾಂಕರ್ ಅನ್ನು ಶಿವಮೊಗ್ಗದ ಪ್ರಮುಖ ವೃತ್ತವೊಂದರಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಮಹಾಪೌರರಾದ ಶಿವಕುಮಾರ್,ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಡಾ.ಹಿರೇಮಠ್,ಪಾಲಿಕೆ ಸದಸ್ಯರುಗಳು,ಪಾಲಿಕೆ ಅಧಿಕಾರಿಗಳು,ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.