ಆಧುನಿಕ ಕ್ರಿಕೆಟ್ನ ನಂ.1 ಅನಿಸಿಕೊಂಡಿರುವ ವಿರಾಟ್ ಸದ್ಯ ಜನಪ್ರಿಯತೆಯಲ್ಲಿಯೂ ನಂ.1 ಆಗಿ ಹೊರಹೊಮ್ಮಿದ್ದಾರೆ.ಕ್ರೋಲ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ, ಕೊಹ್ಲಿ ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರೆಟಿಯಾಗಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಹಿಂದಿಕ್ಕಿ ಮರಳಿ ಅಗ್ರಸ್ಥಾನಕ್ಕೆ ಕೊಹ್ಲಿ ಮರಳಿದ್ದಾರೆ. ರಣವೀರ್ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ, ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.
2020ನೇ ಸಾಲಿನಲ್ಲಿ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯ 2,000 ಕೋಟಿ ರೂ. ಇತ್ತು. 2022ರಲ್ಲಿ 1474 ಕೋಟಿ ರೂ. ಆಗಿತ್ತು. ಇನ್ನು 2023ರ ಬ್ರ್ಯಾಂಡ್ ಮೌಲ್ಯ ಶೇ. 29ರಷ್ಟು ಏರಿಕೆ ಕಂಡು 1900 ಕೋಟಿ ರೂ. ಆಗಿದ್ದು, ವಿರಾಟ್ ದುಬಾರಿ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಣವೀರ್ ಸಿಂಗ್ 1692 ಕೋಟಿ ರೂ. ಹಾಗೂ ಮೂರನೇ ಸ್ಥಾನದಲ್ಲಿರುವ ಶಾರುಕ್ 1000 ಕೋಟಿ ರೂ. ಬ್ರ್ಯಾಂಡ್ ವ್ಯಾಲ್ಯು ಹೊಂದಿದ್ದಾರೆ. ಇನ್ನು ಈ ಜನಪ್ರಿಯ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಇತರೆ ಕ್ರಿಕೆಟಿಗರನ್ನು ನೋಡೋದಾದ್ರೆ, ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ 7ನೇ ಸ್ಥಾನ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 8ನೇ ಸ್ಥಾನದಲ್ಲಿದ್ದಾರೆ. ಅವರು ಕ್ರಮವಾಗಿ 798 ಮತ್ತು 760 ಕೋಟಿ ರೂ.ಗಳ ಬ್ರ್ಯಾಂಡ್ ಮೌಲ್ಯ ಹೊಂದಿದ್ದಾರೆ. ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್ನ ಕಿಂಗ್ ತನ್ನ ಬ್ರ್ಯಾಂಡ್ ಸಾಮ್ರಾಜ್ಯ ಕಟ್ಟಿದ್ದು ಜನಪ್ರಿಯತೆಯಲ್ಲಿಯೂ ತಾನೇ ಕಿಂಗ್ ಎಂಬುದನ್ನು ಸಾಬೀತು ಮಾಡಿದ್ದಾರೆ.