ನ್ಯೂಯಾರ್ಕ್ ನಗರದ ಮೇಯರ್ ಆಗಿ, ಭಾರತೀಯ ಮೂಲದ ಡೆಮೋಕ್ರಾಟ್ ಜೊಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದಾರೆ. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ವಿಧಾನಸಭಾ ಸದಸ್ಯ ಮತ್ತು ಸ್ವಯಂ-ಪ್ರಜಾಪ್ರಭುತ್ವವಾದಿ, ಸಮಾಜವಾದಿ, 34 ವರ್ಷದ ಮಮ್ದಾನಿ, ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮೇಯರ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಿದ್ದಾರೆ. ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಹಾಗೂ ಆಫ್ರಿಕಾದಲ್ಲಿ ಜನಿಸಿದ ಮೊದಲ ಮೇಯರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಜನವರಿ 1ರಂದು ಜೊಹ್ರಾನಿ ಮಮ್ದಾನಿ ಅಧಿಕಾರ ವಹಿಸಿಕೊಳ್ಳಲಿದ್ದು, ಕಿರಿಯ ಮೇಯರ್ ಆಗಿ ದಾಖಲೆ ಬರೆಯಲಿದ್ದಾರೆ. ಕಳೆದ 1 ಶತಮಾನದಲ್ಲೇ ಮೇಯರ್ ಹುದ್ದೆಗೇರಿದ, ಅತ್ಯಂತ ಕಿರಿಯ ವಯಸ್ಸಿಗ ಎಂಬ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಮೆಟ್ರೋ ಡೋರ್ ಓಪನ್ ಆದ ತಕ್ಷಣ ಸಿಟಿ ಹಾಲ್ ಎಂಬ ಬೋರ್ಡ್ ಕಾಣಿಸುತ್ತದೆ. ಕೊನೆಗೆ ಜೊಹ್ರಾನ್ ಫಾರ್ ನ್ಯೂಯಾರ್ಕ್ ಸಿಟಿ ಎಂಬ ಬರಹ ಕಾಣಿಸುತ್ತದೆ. ಸಿಟಿ ಹಾಲ್ ಎಂದರೆ ಮೇಯರ್ ಕಚೇರಿ ಇರುವ ಸ್ಥಳ ಎನ್ನಲಾಗಿದೆ.
ಉಗಾಂಡಾದ ಕಂಪಾಲಾದಲ್ಲಿ 1991ರ ಅಕ್ಟೋಬರ್ 18ರಂದು ಜನಿಸಿದ ಜೊಹ್ರಾನ್ ಮಮ್ದಾನಿ, ಖ್ಯಾತ ವಿದ್ವಾಂಸ ಮಹಮೂದ್ ಮಮ್ದಾನಿ ಮತ್ತು ಭಾರತೀಯ ಮೂಲದ ಹೆಸರಾಂತ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ, ಎಡಪಂಥೀಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂಬ ವಾದಕ್ಕೆ, ಮಮ್ದಾನಿ ಅವರ ಈ ಗೆಲುವು ಮತ್ತಷ್ಟು ಬಲವನ್ನು ನೀಡಿದೆ.
ಈ ಬಾರಿಯ ಮೇಯರ್ ಚುನಾವಣೆ ಕಳೆದ 50 ವರ್ಷಗಳಲ್ಲೇ, ಅತಿ ಹೆಚ್ಚು ಮತದಾನಕ್ಕೆ ಸಾಕ್ಷಿಯಾಗಿದೆ. ನಗರದ ಚುನಾವಣಾ ಆಯೋಗದ ಪ್ರಕಾರ, ಸುಮಾರು 20 ಲಕ್ಷಕ್ಕೂ ಅಧಿಕ ನ್ಯೂಯಾರ್ಕ್ ನಿವಾಸಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ.

