ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಜೆಡಿಎಸ್ ಬೆಂಬಲ ಘೋಷಿಸಿದೆ. ಈಗಾಗಲೇ ಮೈತ್ರಿ ಪಕ್ಷವಾದ ಬಿಜೆಪಿ ಅಖಾಡಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ, ಹೋರಾಟಕ್ಕೆ ಧುಮುಕುವ ಮುನ್ಸೂಚನೆ ಕೊಟ್ಟಿದ್ದಾರೆ. ಬೆಂಗಳೂರಿನ ಕಚೇರಿಯಲ್ಲಿ ಜೆಡಿಎಸ್ ಸಭೆ ನಡೆಸಲಾಯ್ತು. ಬಳಿಕ ಮಾಧ್ಯಮಗಳ ಜೊತೆ ನಿಖಿಲ್ ಮಾತನಾಡಿದ್ದಾರೆ. ಈ ವೇಳೆ ಅನ್ನದಾತರ ಅಹೋರಾತ್ರಿ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.
ರೈತರ ಜೊತೆ ಸದಾ ಕಾಲ ನಾವಿದ್ದೇವೆ. ಬೆಳಗಾವಿಯಲ್ಲಿ ಸಾವಿರಾರು ರೈತರು ಆಕ್ರೋಶಭರಿತರಾಗಿ ಬಂದು ಹೋರಾಟ ಮಾಡುತ್ತಿದ್ದಾರೆ. 6 ದಿನ ಪೂರೈಸಿದ್ರೂ ಇಲ್ಲಿಯವರೆಗೂ ಮುಖ್ಯಮಂತ್ರಿಗಳಾಗಲಿ, ಉಸ್ತುವಾರಿಗಳಾಗಲಿ ಚಕಾರ ಎತ್ತಿಲ್ಲ. ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದು ಅರ್ಥ ಆಗುತ್ತದೆ. ರಾಜಕೀಯವನ್ನು ಬದಿಗಿಟ್ಟು ಮಾತನಾಡೋದಾದ್ರೆ, ಬೇರೆ ಬೇರೆ ಪಕ್ಷಗಳಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರಿದ್ದಾರೆ.
ಈ ವಿಚಾರದಲ್ಲಿ ರಾಜಕಾರಣ ಮಾಡೋದು ಬೇಡ. ರೈತರು ಮುಖ್ಯವಾಗಿದ್ದಾರೆ. ಸುಮ್ಮನೆ ಅವರವರ ರಾಜಕಾರಣದ ಬೇಳೆ ಬೇಯಿಸಿಕೊಳ್ಳೋಕೆ ಹೊರಟಿದ್ದಾರೆ. ರೈತರು ಬಲಿಪಶುಗಳನ್ನಾಗಿ ಮಾಡೋದ್ ಬೇಡ. ರೈತರು ಕೇಳುತ್ತಿರುವುದು ದೊಡ್ಡ ವಿಚಾರ ಅಲ್ಲ. ಮುಖ್ಯಮಂತ್ರಿಗಳ ಕಡೆಯಿಂದ ಒಂದೇ ಒಂದು ಸ್ಟೇಟ್‌ಮೆಂಟ್ ಬಂದಿಲ್ಲ. ಉಸ್ತುವಾರಿಗಳು ಮಧ್ಯಪ್ರವೇಶ ಮಾಡಿಲ್ಲ. ಚರ್ಚೆಯನ್ನೂ ಮಾಡಿಲ್ಲ. ಅತೀ ಶೀಘ್ರದಲ್ಲೇ ನಾವೂ ರೈತರನ್ನ ಭೇಟಿ ಮಾಡುತ್ತೇವೆಂದು ಹೇಳಿದ್ದಾರೆ.
ಇದೇ ವೇಳೆ, ಮಂಡ್ಯ ರೈತ ಆತ್ಮಹತ್ಯೆ ಬಗ್ಗೆಯೂ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರ ಸ್ಪಂದಿಸದೇ ಇರೋದ್ರಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ. ಮತ್ತೊಂದು ವೈಫಲ್ಯವಾಗಿದೆ. ಈ ರೀತಿಯ ಪ್ರಕರಣ ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಜೀವಕ್ಕೆ ಬೆಲೆ ಕಟ್ಟುವುದಕ್ಕೆ ಆಗಲ್ಲ. ಅನ್ನ ಹಾಕೋನೋ ರೈತ. ರೈತನನ್ನೇ ಕಾಪಾಡಿಕೊಳ್ಳದಿದ್ದರೆ ಹೇಗೆ ಎಂದು, ನಿಖಿಲ್ ಕುಮಾರಸ್ವಾಮಿ ಗುಡುಗಿದ್ದಾರೆ.
ನಮ್ಮ ಪಕ್ಷವನ್ನು ಬಲವಾಗಿ ಕಟ್ಟುವುದೇ ನಮ್ಮ ಮುಂದೆ ಇರುವ ಪ್ರಮುಖ ವಿಚಾರ. ಹಿಂದೆ ಗೆದ್ದವರು, ಪ್ರಬಲವಾದ ಲೀಡರ್ ಶಿಪ್ ಇರುವವರನ್ನು ಕರೆದು ಮಾತನಾಡಿ, ಪರಿಗಣನೆಗೆ ತೆಗೆದುಕೊಂಡು ಹೋಗುವುದಷ್ಟೇ ನಮ್ಮ ಉದ್ದೇಶ. ಮೈತ್ರಿಗೆ ಸಂಬಂಧಿಸಿದಂತೆ ದೇವೇಗೌಡ್ರು, ಕುಮಾರಣ್ಣ, ಬಿಜೆಪಿ ರಾಜ್ಯ ನಾಯಕರು, ಕೇಂದ್ರ ನಾಯಕರಿದ್ದಾರೆ. ಅವರಿಗೆ ಎಲ್ಲವನ್ನೂ ಬಿಡುತ್ತೇವೆ. ನಮ್ಮ ಉದ್ದೇಶ ಕೇವಲ ಪಕ್ಷ ಕಟ್ಟುವುದಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ರು.
ಒಟ್ನಲ್ಲಿ, ಮಣ್ಣಿನ ಮಗ ಎಂದೇ ದೇವೇಗೌಡ್ರು ಖ್ಯಾತಿ ಪಡೆದಿದ್ರು. ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ರು. ಈಗ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರೈತರ ಜೊತೆ ಕೈಜೋಡಿಸಲು ಜೆಡಿಎಸ್ ಪಾಳಯ ಸಜ್ಜಾಗಿದೆ.

