Spiritual Story: ವಿದ್ಯೆಗೆ ಅಧಿದೇವತೆ ಸರಸ್ವತಿ. ಸರಸ್ವತಿಯ ಕೃಪೆ ಇದ್ದರೆ, ನಾವು ಸರಾಗವಾಗಿ ಮಾತನಾಡಬಹುದು. ವಿದ್ಯಾವಂತರೂ, ಬುದ್ಧಿವಂತರೂ ಆಗಬಹುದು. ಆ ಕೃಪೆ ಬೇಕು ಎಂದರೆ, ಸರಸ್ವತಿ ದೇವಿಯ ಆರಾಧನೆ ಮಾಡಬೇಕು. ಹಾಗಾಗಿ ನಾವಿಂದು ರಾಜಸ್ಥಾನದಲ್ಲಿರುವ ಸರಸ್ವತಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಜಾರಿ ಗ್ರಾಮದಲ್ಲಿ ಸರಸ್ವತಿ ದೇವಿಯ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಹೋಗಿ, ದೇವಿಯ ದರ್ಶನ ಮಾಡಿ, ಪೂಜೆ ಸಲ್ಲಿಸಬೇಕು. ಪುಸ್ತಕ, ಪೆನ್ನು, ಪೆನ್ಸಿಲುಗಳನ್ನು ದೇವರ ಮುಂದಿಟ್ಟು, ಒಳ್ಳೆಯ ವಿದ್ಯೆ ಬುದ್ಧಿ ಕೊಡು ಎಂದು ಬೇಡಿದರೆ, ದೇವಿ ಅವರ ಆಸೆಯನ್ನೆಲ್ಲ ಈಡೇರಿಸುತ್ತಾಳೆ ಅನ್ನುವ ನಂಬಿಕೆ ಇದೆ.
ಇನ್ನು ಹುಟ್ಟಿದಾಗಿನಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗದೇ, ಮೂಗರಾದವರು ಈ ದೇವಸ್ಥಾನಕ್ಕೆ ಬಂದು ದೇವಿಯ ಬಳಿ, ಮಾತು ಕೊಡುವಂತೆ ಕೇಳುತ್ತಾರೆ. ಅಂಥವರು ಮಾತನಾಡಲು ಶುರು ಮಾಡಿದ ಬಳಿಕ, ಬೆಳ್ಳಿಯ ನಾಲಿಗೆ ತಂದು ಹರಕೆಯ ರೂಪದಲ್ಲಿ ಸಮರ್ಪಿಸಿ ಹೋಗುತ್ತಾರೆ.
ಬರೀ ಮಾತಷ್ಟೇ ಅಲ್ಲದೇ, ತೊದಲುವಿಕೆ, ತುಟಿ ಒಡೆಯುವುದು, ದಡ್ಡ ಮಕ್ಕಳು, ಇಂಥ ಮಕ್ಕಳನ್ನೆಲ್ಲ ಪೋಷಕರು ಈ ದೇವಸ್ಥಾನಕ್ಕೆ ಕರೆತಂದು ದೇವಿಯಲ್ಲಿ ಸಮಸ್ಯೆ ಸರಿದೂಗಿಸುವಂತೆ ಬೇಡುತ್ತಾರೆ. ಹೀಗೆ ಬಂದು ಹಲವರ ಸಮಸ್ಯೆ ಬಗೆಹರಿದ ಉದಾಹರಣೆಗಳಿದೆ.
ಇನ್ನು ಸಂಗೀತಗಾರರು, ನೃತ್ಯಪಟುಗಳು ಸೇರಿ ಹಲವು ಕಲಾವಿದರು ಕಲಾ ಸರಸ್ವತಿಗೆ ಪೂಜೆ ಸಲ್ಲಿಸಿ, ಧನ್ಯವಾದ ಸಲ್ಲಿಸಲು ಈ ದೇವಸ್ಥಾನಕ್ಕೆ ಬರುತ್ತಾರೆ. ಇನ್ನು ವಸಂತ ಪಂಚಮಿಯಂದು ಸರಸ್ವತಿಯ ಪೂಜೆ ಮಾಡುವುದರಿಂದ, ವಸಂತ ಪಂಚಮಿಯಂದು ಇಲ್ಲಿ ಜನಜಂಗುಳಿ ಇರುತ್ತದೆ. ಜಾತ್ರೆಯ ರೀತಿ ಇಲ್ಲಿ ವಸಂತ ಪಂಚಮಿ ಆಚರಿಸುತ್ತಾರೆ.