ಮಹಾಭಾರತದ ಮೇನ್ ವಿಲನ್ ಶಕುನಿ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆತನಿಂದಲೇ ಮಹಾಭಾರತ ಯುದ್ಧ ಶುರುವಾಗಿದ್ದು ಅಂದರೂ ತಪ್ಪಾಗಲ್ಲ. ತನ್ನ ಪೂರ್ವಜರ ಸಾವಿಗೆ ದ್ವೇಷ ತೀರಿಸಿಕೊಳ್ಳಲು ಬಂದಿದ್ದ ಶಕುನಿ, ದುರ್ಯೋಧನನ ಮನಗೆದ್ದು, ಕೊನೆಗೆ ಅವನ ಅಂತ್ಯಕ್ಕೆ ಕಾರಣನಾದ. ಆದ್ರೆ ಅದೆಲ್ಲ ಸಾಧ್ಯವಾಗಿದ್ದು, ಅವನ ಬಳಿ ಇದ್ದ ಜಾದೂ ದಾಳದಿಂದ. ಆ ದಾಳ ಹಾಕಿ ದ್ರೌಪದಿ ವಸ್ತ್ರಾಪಹರಣ ಆಗುವಂತೆ ಮಾಡಿದ. ನಂತರ ದ್ರೌಪದಿ ದುರ್ಯೋಧನನ ವಿರುದ್ಧ ಪಾಂಡವರು ಯುದ್ಧ ಮಾಡುವಂತೆ ಮಾಡಿದಳು. ಇದೆಲ್ಲ ನಡೆದಿದ್ದು ಆ ದಾಳದಿಂದ. ಆ ದಾಳದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ..
ಧೃತರಾಷ್ಟ್ರನಿಗೆ ಮದುವೆಯಾಗುವುದಕ್ಕೂ ಮುಂಚೆ, ಗಾಂಧಾರಿಯ ತಂದೆ ಗಾಂಧಾರ ರಾಜ್ಯದ ರಾಜ ಗಾಂಧಾರ ನರೇಶ, ಗಾಂಧಾರಿಯ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದ. ಜ್ಯೋತಿಷಿಗಳು ಗಾಂಧಾರಿ ಮದುವೆಯಾಗುವ ಹುಡುಗ ತೀರಿಹೋಗುತ್ತಾನೆ. ಆಕೆ ವಿಧವೆಯಾಗುತ್ತಾಳೆ. ನಂತರ ಆಕೆ ಎರಡನೇಯ ಮದುವೆಯಾಗಬೇಕಾಗುತ್ತದೆ ಎಂದು ಹೇಳುತ್ತಾರೆ. ಆ ಕಾರಣಕ್ಕೆ ಗಾಂಧಾರಿ ಮೊದಲು ಮೇಕೆಯನ್ನು ಮದುವೆಯಾಗುತ್ತಾಳೆ. ನಂತರ ಆ ಮೇಕೆ ಬೇರೆಯವರಿಂದ ಕೊಲ್ಲಲ್ಪಡುತ್ತದೆ.
ನಂತರ ಭೀಷ್ಮ ಪಿತಾಮಹ ಗಾಂಧಾರಿ ಬಳಿ ಧೃತರಾಷ್ಟ್ರನನ್ನು ಮದುವೆಯಾಗುತ್ತಿಯಾ ಎಂದು ನೆಂಟಸ್ಥನ ತಂದಾಗ, ಗಾಂಧಾರಿ ಧೃತರಾಷ್ಟ್ರನನ್ನು ಮದುವೆಯಾಗಲು ಒಪ್ಪುತ್ತಾಳೆ. ಆದ್ರೆ, ಗಾಂಧಾರ ರಾಜ, ನಿನ್ನ ನಿರ್ಧಾರವನ್ನು ಬದಲಿಸುವುದಾದರೆ ಬದಲಿಸು, ಕುರುಡನನ್ನು ಮದುವೆಯಾಗಲು ನಿನ್ನ ಮನಸ್ಸು ಒಪ್ಪುತ್ತದೆಯೇ ಎಂದು ಕೇಳಿದರು. ಆದರೆ ಗಾಂಧಾರಿ ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ನಾನು ಧೃತರಾಷ್ಟ್ರನನ್ನೇ ವಿವಾಹವಾಗುತ್ತೇನೆಂದು ಹೇಳಿದಳು.
ಆದ್ರೆ ಗಾಂಧಾರಿಯ ಈ ನಿರ್ಧಾರ ಶಕುನಿಗೆ ಒಂದು ಚೂರು ಇಷ್ಟವಿರಲಿಲ್ಲ. ನಂತರ ಗಾಂಧಾರಿ ಮತ್ತು ಧೃತರಾಷ್ಟ್ರ ವಿವಾಹವಾದರು. ಕೆಲ ವರ್ಷಗಳ ಬಳಿಕ ಗಾಂಧಾರಿ ಮೇಕೆಯೊಂದಿಗೆ ಮದುವೆಯಾಗಿ, ಆ ಮೇಲೆ ಸತ್ತು ಹೋಗಿದ್ದು ಧೃತರಾಷ್ಟ್ರ ಮತ್ತು ಅವನ ಸಹೋದರ ಪಾಂಡುರಾಜನಿಗೆ ಗೊತ್ತಾಯಿತು. ಅವರಿಗೆ ಕೋಪ ಬಂದು, ಗಾಂಧಾರಿಯ ಮನೆಯ ಪುರುಷರು ಯಾರಿಗೂ ನಮ್ಮ ಅರಮನೆಗೆ ಪ್ರವೇಶವಿಲ್ಲ. ಅವರಿಗೆಲ್ಲ ಜೈಲು ಶಿಕ್ಷೆ ವಿಧಿಸಲಾಗುವುದೆಂದು ಹೇಳಿ, ಅವರನ್ನು ಜೈಲಿಗಟ್ಟಲಾಯಿತು.
ಅರಮನೆಯಲ್ಲಿರುವ ಜೈಲಿನಲ್ಲಿ ಗಾಂಧಾರಿಯ ಅಪ್ಪ ಮತ್ತು ಅಣ್ಣ ಸೇರಿ, ಪುರುಷರನ್ನು ಇರಿಸಲಾಗಿತ್ತು. ಖೈದಿಗಳನ್ನು ಕೊಲ್ಲುವುದು ಧೃತರಾಷ್ಟ್ರನಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರಿಗೆಲ್ಲ ಪ್ರತಿದಿನ ಬರೀ ಒಂದು ಅಗಳು ಅನ್ನ ನೀಡಬೇಕೆಂದು ಆದೇಶಿಸಿದನು. ಆಗ ಗಾಂಧಾರ ಪುರುಷರೆಲ್ಲ ಸೇರಿ, ನಮಗೆ ಕೊಡುವ ಒಂದು ಅಗಳು ಅನ್ನವನ್ನ ಸೇರಿಸಿ, ನಾವು ಶಕುನಿಗೆ ಕೊಡೋಣ, ಆ ಅನ್ನವನ್ನು ತಿಂದ ಶಕುನಿ ಬದುಕಲಿ. ಮತ್ತು ಕುರುವಂಶವನ್ನ ಸರ್ವನಾಶ ಮಾಡಲಿ ಎಂದು ಹೇಳುತ್ತಾರೆ. ಹೀಗೆ ಪ್ರತಿದಿನ ತಮಗೆ ಸಿಗುವ ಅನ್ನವನ್ನು ಶಕುನಿಗೆ ಕೊಟ್ಟು, ಅವರೆಲ್ಲ ಜೀವ ಬಿಡುತ್ತಾರೆ. ಶಕುನಿ ಬದುಕುತ್ತಾನೆ.
ನಂತರದ ದಿನದಲ್ಲಿ ದುರ್ಯೋಧನ ಶಕುನಿಯ ಮೇಲೆ ಕನಿಕರ ತೋರಿ, ತನ್ನೊಂದಿಗೆ ಇರಿಸಿಕೊಳ್ಳುತ್ತಾನೆ. ಇದಕ್ಕೂ ಮುನ್ನ ತನ್ನ ಕುಟುಂಬಸ್ಥರ ಮರಣವನ್ನ ನೋಡಿದ್ದ ಶಕುನಿ, ಕೊನೆಯದಾಗಿ ತನ್ನ ತಂದೆಯ ಸಾವನ್ನ ನೋಡುತ್ತಾನೆ. ಶಕುನಿಯ ತಂದೆ ಸಾಯುವುದಕ್ಕೂ ಮುನ್ನ, ನನ್ನ ಮೂಳೆಯನ್ನು ತೆಗೆದು ಅದರಿಂದ ದಾಳವನ್ನು ಮಾಡು, ಆ ದಾಳದಿಂದಲೇ ಕುರುವಂಶದ ನಾಶ ಮಾಡೆಂದು ಹೇಳುತ್ತಾನೆ. ಆಗ ಶಕುನಿ ಅಪ್ಪನ ಮರಣದ ಬಳಿಕ, ಅಪ್ಪನ ಮಾತಿನಂತೆ ಅಪ್ಪನ ಮೂಳೆಯಿಂದ ದಾಳ ಮಾಡುತ್ತಾನೆ. ಇದರಿಂದಲೇ ಕೌರವರ ವಿನಾಶ ಮಾಡುತ್ತಾನೆ.