ಆನೆಯನ್ನ ಹಿಂದೂಗಳು ಗಣಪತಿಯ ಸ್ವರೂಪ ಅಂತಾ ಕರಿಯುತ್ತಾರೆ. ಇಂಥ ಆನೆಗೆ ಹಿಂದೂಧರ್ಮದಲ್ಲಿ ಉನ್ನತ ಸ್ಥಾನವನ್ನೇ ನೀಡಲಾಗಿದೆ. ಗಜಲಕ್ಷ್ಮೀಯ ವಾಹನ ಆನೆ. ಗಜಲಕ್ಷ್ಮೀಯ ಫೋಟೋ ಮನೆಯಲ್ಲಿದ್ರೆ, ಮನೆ ಅಭಿವೃದ್ಧಿ ಕಾಣುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಇವತ್ತು ನಾವು ಬೆಳ್ಳಿ ಆನೆ ಮನೆಯಲ್ಲಿದ್ದರೆ, ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವಾಸ್ತುಶಾಸ್ತ್ರದ ಪ್ರಕಾರ ಬೆಳ್ಳಿ ಆನೆಯನ್ನ ಮನೆಯಲ್ಲಿರಿಸಿದರೆ, ಉತ್ತಮ ಅಂತಾ ಹೇಳಲಾಗುತ್ತದೆ. ಬೆಳ್ಳಿಯನ್ನ ಬೆಳಕು ಎನ್ನಲಾಗುತ್ತದೆ. ಬೆಳ್ಳಿ ವಸ್ತುಗಳು ಮನೆಯಲ್ಲಿದ್ದರೆ ಉತ್ತಮ ಅಂತಾನೂ ಹೇಳಲಾಗುತ್ತದೆ. ಮನೆಯಲ್ಲಿ, ಕಚೇರಿಯಲ್ಲಿ, ಅಂಗಡಿಯಲ್ಲಿ ನೀವು ಬೆಳ್ಳಿ ಆನೆಯನ್ನ ಇಡಬಹುದು. ಉತ್ತರ ದಿಕ್ಕಿಗೆ ಮುಖ ಮಾಡಿ, ಈ ಬೆಳ್ಳಿ ಆನೆ ಇರಿಸುವುದು ಉತ್ತಮ.

ಆದ್ರೆ ಯಾವುದೇ ಕಾರಣಕ್ಕೂ ಹೊರಗಿನವರು ಈ ಬೆಳ್ಳಿ ಆನೆಯನ್ನ ಮುಟ್ಟಬಾರದು. ಮನೆಯಲ್ಲಿ ಬೆಳ್ಳಿ ಆನೆ ಇರಿಸುವುದಿದ್ದರೆ, ದೇವರ ಕೋಣೆಯಲ್ಲಿರಿಸಿ. ಅಂಗಡಿಯಲ್ಲಿ ಅಥವಾ ಕಚೇರಿಯಲ್ಲಿರಿಸುವುದಿದ್ದರೆ, ಯಾರೂ ಕೂಡ ಆ ಜಾಗದಲ್ಲಿ ಸುಳಿಯದ ಹಾಗೆ ನೋಡಿಕೊಳ್ಳಿ. ಮಡಿ ಇಲ್ಲದೇ, ಮನಸ್ಸು ಬಂದಾಗ, ಬೆಳ್ಳಿ ಆನೆ ಮೂರ್ತಿಯನ್ನ ಮುಟ್ಟಬಾರದು. ಸೂತಕವಿದ್ದಾಗ, ಹೆಣ್ಣು ಮಕ್ಕಳು ಮುಟ್ಟಾದಾಗ ಎಲ್ಲ ಇದನ್ನ ಮುಟ್ಟಬಾರದು. ಇದರಿಂದ ಬೆಳ್ಳಿ ಆನೆಯ ಶಕ್ತಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಮಡಿಯಿಂದ ಪೂಜೆ ಸಲ್ಲಿಸಬೇಕು. ಹೊರಗಿನವರಿಗೆ ಆ ಬೆಳ್ಳಿ ಆನೆಯನ್ನ ಮುಟ್ಟಲು ಬಿಡಬಾರದು.

ಇನ್ನು ಬೆಳ್ಳಿ ಆನೆಯನ್ನ ಯಾಕೆ ಮನೆಯಲ್ಲಿಡಬೇಕು ಅನ್ನೋ ಪ್ರಶ್ನೆಗೆ ಉತ್ತರ, ಇದರಿಂದ ಮನೆ ಅಭಿವೃದ್ಧಿಯಾಗುತ್ತದೆ. ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗಿರುತ್ತದೆ. ಅಲ್ಲದೇ, ಸತಿ ಪತಿ ಕಲಹ ಹೆಚ್ಚಾಗಿದ್ದರೆ, ಬೆಳ್ಳಿ ಆನೆ ತಂದಿರಿಸಿ ಪೂಜೆ ಮಾಡಬೇಕು. ಇನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಬೆಳ್ಳಿ ಆನೆಯನ್ನ ಕಪಾಟಿನಲ್ಲಿರಿಸುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ ಎಂಬ ನಂಬಿಕೆ ಇದೆ.




