ಸದ್ಯ ಚಳಿಗಾಲ ಶುರುವಾಗಿದೆ. ಈ ಚಳಿಯಲ್ಲಿ ನೆಗಡಿ, ಕೆಮ್ಮು ಬರೋದು ಸಹಜ. ಆದ್ರೆ ನಾವು ಸೇವಿಸೋ ಕೆಲ ಆಹಾರಗಳು ನಮ್ಮ ದೇಹ ಸ್ಥಿತಿಯನ್ನ ಸಮತೋಲನದಲ್ಲಿಡುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ಚಳಿಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಈ ವೇಳೆ ನೀವು ಸಿರಿಧಾನ್‌ಯಗಳ ಸೇವನೆ ಮಾಡುವುದು ಉತ್ತಮ. ರಾಗಿ ದೋಸೆ, ಮುದ್ದೆ, ರೊಟ್ಟಿ. ಸಾಮೆ, ನವಣೆಯ ಉಪ್ಪಿಟ್ಟು. ಹೀಗೆ ಸಿರಿಧಾನ್ಯಗಳ ಪದಾರ್ಥ ಮಾಡಿ ತಿನ್ನೋದು ಒಳ್ಳೆಯದು. ಇದು ಉಷ್ಣ ಪದಾರ್ಥವಾಗಿರುವುದರಿಂದ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ.
ಇನ್ನು ಕಿತ್ತಳೆ ಹಣ್ಣು. ಕಿತ್ತಳೆ ಹಣ್ಣು ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣಾಗಿದೆ. ಚಳಿಗಾಲದಲ್ಲಿ ತಂಪು ಹಣ್ಣು ತಿಂದ್ರೆ ನೆಗಡಿಯಾಗೋದಿಲ್ವಾ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಚಳಿಗಾಲದಲ್ಲಿ ತಂಪಾದ ಹಣ್ಣು ಅಂದ್ರೆ ಕಿತ್ತಳೆ ಹಣ್ಣು ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಚಳಿಗಾಲ ಅಂತಾ ನಾವು ಉಷ್ಣ ಪದಾರ್ಥವನ್ನೇ ಹೆಚ್ಚಾಗಿ ತಿನ್ನುತ್ತೇವೆ. ಅದರೊಂದಿಗೆ ಕಿತ್ತಳೆ ತಿನ್ನುವುದರಿಂದ ನಮ್ಮ ದೇಹ ಸಮತೋಲನವಾಗಿರುತ್ತದೆ. ಆಗ ಆರೋಗ್ಯವೂ ಉತ್ತಮವಾಗಿರುತ್ತದೆ.
ಮೂರನೇಯದಾಗಿ ನೆನೆಸಿಟ್ಟ ಶೇಂಗಾ ಬೀಜ. ಶೇಂಗಾ ಬೀಜವನ್ನ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. 20 ಶೇಂಗಾ ಕಾಳು ತಿಂದರೂ ಸಾಕು. ಇದರಿಂದ ನಮ್ಮ ದೇಹದಲ್ಲಿನ ಉಷ್ಣತೆ ಸಮಪ್ರಮಾಣದಲ್ಲಿರುತ್ತದೆ. ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂದಲಿನ ಆರೋಗ್ಯ ಮತ್ತು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ನಾಲ್ಕನೇಯದಾಗಿ ಕ್ಯಾರೆಟ್ ಮತ್ತು ಬೀಟ್ರೂಟ್ ತಿನ್ನೋದು ತುಂಬಾನೇ ಉತ್ತಮ. ಕ್ಯಾರೆಟ್, ಬೀಟ್‌ರೂಟ್ ಜ್ಯೂಸ್, ಸಲಾಡ್ ಮಾಡಿಕೊಂಡು ಸೇವಿಸಬಹುದು. ಇದು ಚಳಿಗಾಲದಲ್ಲಿ ನಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಐದನೇಯದಾಗಿ ಹಸಿರು ಸೊಪ್ಪುಗಳು. ಪಾಲಕ್, ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು, ಬಸಳೆ ಸೊಪ್ಪು, ಹರಿವೆ ಸೊಪ್ಪು ಇತ್ಯಾದಿ ಸೊಪ್ಪುಗಳ ಸೇವನೆ ಮಾಡಬೇಕು. ಇದು ನಮ್ಮ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಐದನೋಯದಾಗಿ ಡ್ರೈಫ್ರೂಟ್ಸ್, ಅರಿಷಿನ ಹಾಲು, ಗ್ರೀನ್ ಟ್ರೀ, ಜೇನುತುಪ್ಪ, ತುಪ್ಪ, ತೆಂಗಿನ ಎಣ್ಣೆ, ಏಲಕ್ಕಿ, ಚಕ್ಕೆ, ಲವಂಗ, ಸೋಂಪು, ಜೀರಿಗೆ ಇತ್ಯಾದಿ ಪದಾರ್ಥಗಳು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ. ಚಳಿಗಾಲದಲ್ಲಿ ಆದಷ್ಟು ಬಿಸಿ ನೀರು ಕುಡಿಯುವುದು ಒಳ್ಳೆಯದು. ನೀರಿಗೆ ತುಳಸಿ ಎಲೆ, ಜೀರಿಗೆ ಹಾಕಿ ಕುದಿಸಿ ಕುಡಿಯುವುದು ಇನ್ನೂ ಒಳ್ಳೆಯದು. ಇದು ಹಲವು ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.