ಮುಂಬೈ:ವೇಗಿ ಹರ್ಷಲ್ ಪಟೇಲ್ ಅವರ ಮಾರಕ ದಾಳಿಯ ನೆರೆವಿನಿಂದ ಆರ್ಸಿಬಿ ಚೆನ್ನೈ ವಿರುದ್ಧ 13 ರನ್ ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿತು. ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾಫ್ ಡುಪ್ಲೆಸಿಸ್ (38) ಹಾಗೂ ವಿರಾಟ್ ಕೊಹ್ಲಿ ( 30) ಮೊದಲ ವಿಕೆಟ್ ಗೆ 62 ರನ್ ಸೇರಿಸಿದರು.
ಈ ವೇಳೆ ದಾಳಿಗಿಳಿದ ಮೊಯಿನ್ ಅಲಿ ಫಾಫ್ ಡುಪ್ಲೆಸಿಸ್ ಹಾಗೂ ಮೊಯಿನ್ ಅಲಿ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ನಂತರ ಮ್ಯಾಕ್ಸ ವೆಲ್ 3 ರನ್ ಗಳಿಸಿ ರನೌಟ್ ಬಲೆಗೆ ಬಿದ್ದರು.
ಮಹಿಪಾಲ್ ಲೊಮೊರೊರ್ 42, ರಜತ್ ಪಟಿದಾರ್ 21, ವನಿಂದು ಹಸರಂಗ 0, ಶಬಾಜ್ ಅಹ್ಮದ್ 1, ಹರ್ಷಲ್ ಪಟೇಲ್ 1 ರನ್ ಗಳಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ 17 ಎಸೆತದಲ್ಲಿ 1 ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೇಯ 26 ರನ್ ಗಳಿಸಿದರು.
ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತು. ಸ್ಪಿನ್ನರ್ ಮಹೇಶ್ ತೀಕ್ಷ್ಣ 3 ವಿಕೆಟ್ ಪಡೆದರು. 174 ರನ್ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭಿಕರಾದ ಋತುರಾಜ್ ಗಾಯಕ್ವಾಡ್ (28) ಹಾಗೂ ಡೇವೊನ್ ಕಾನ್ವೆ (56) ಮೊದಲ ವಿಕೆಟ್ ಗೆ 56 ರನ್ ಸೇರಿಸಿದರು.
ನಂತರ ಬಂದ ರಾಬಿನ್ ಉತ್ತಪ್ಪ 1, ಅಂಬಾಟಿ ರಾಯ್ಡು 10, ಮಧ್ಯಮ ಕ್ರಮಾಂಕದಲ್ಲಿ ಬಂದ ಮೊಯಿನ್ ಅಲಿ 34 ರನ್ ಹೊಡೆದು ಭರವಸೆ ಮೂಡಿಸಿದರು. ಆದರೆ 18ನೇ ಓವರ್ ನಲ್ಲಿ ದಾಳಿಗಿಳಿದ ಹರ್ಷಲ್ ಪಟೇಲ್ ಮೊಯಿನ್ ಅಲಿ ಅವರನ್ನು ಪೆವಿಲಿಯನ್ಗೆ ಅಟ್ಟಿ ಪಂದ್ಯಕ್ಕೆ ತಿರುವು ನೀಡಿದರು.
ಧೊನಿ 2, ಡ್ವೇನ್ ಪ್ರಿಟೋರಿಯಸ್ 13, ಸಿಮ್ರಾಜೀತ್ ಸಿಂಗ್ 2, ಮಹೇಶ್ ತೀಕ್ಷ್ಣ 7 ರನ್ ಗಳಿಸಿದರು. ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸುವಲ್ಲಿ ಮಾತ್ರ ಶಕ್ತವಾಯಿತು. ಆರ್ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.