ಮುಂಬೈ: ಹೊಡಿ ಬಡಿ ಆಟಗಾರ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಗುಜರಾತ್ ಟೈಟನ್ಸ್ ಚೆನ್ನೈ ವಿರುದ್ಧ ರೋಚಕ ಗೆಲುವು ಪಡೆದಿದೆ.

ಪುಣೆಯಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ರಾಬಿನ್ ಉತ್ತಪ್ಪ ಉತ್ತಮ ಆರಂಭ ಕೊಡಲಿಲ್ಲ.
ರಾಬಿನ್ ಉತ್ತಪ್ಪ ಯಶ್ ದಯಾಳ್‍ಗೆ ವಿಕೆಟ್ ಒಪ್ಪಿಸಿದರೆ ಮೊಯಿನ್ ಅಲಿ ಮೊಹ್ಮದ್ ಶಮಿಗೆ ಬಲಿಯಾದರು. ಋತುರಾಜ್ ಜೊತೆಗೂಡಿದ ಅಂಬಾಟಿ ರಾಯ್ಡು ತಂಡದ ಕುಸಿತವನ್ನು ತಡೆದರು. ಈ ಜೋಡಿ ನಾಲ್ಕನೆ ವಿಕೆಟ್‍ಗೆ 92 ರನ್ ಸೇರಿಸಿತು.
ಅಂಬಟಿ ರಾಯ್ಡು 46 ರನ್ ಗಳಿಸಿ ಜೋಸೆಫ್‍ಗೆ ವಿಕೆಟ್ ಒಪ್ಪಿಸಿದರು. ಗಾಯಕ್ವಾಡ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಒಟ್ಟು 73 ರನ್ ಚಚ್ಚಿದರು.ಶಿವಂ ದುಬೆ 19, ರವೀಂದ್ರ ಜಡೇಜಾ ಅಜೆಯ 22 ರನ್ ಗಳಿಸಿದರು. ಚೆನ್ನೈ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದರು.
170 ರನ್‍ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೃದ್ದಿಮಾನ್ ಸಾಹಾ 11, ಶುಭಮನ್ ಗಿಲ್ 0,ವಿಜಯ್ ಶಂಕರ್ 0, ಅಭಿನವ್ ಮನೋಹರ್ 12, ರಾಹುಲ್ ತೆವಟಿಯಾ 6 ರನ್ ಗಳಿಸಿದರು.
87ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ಡೇವಿಡ್ ಮಿಲ್ಲರ್‍ಗೆ ರಶೀದ್ ಖಾನ್ ಒಳ್ಳೆಯ ಸಾಥ್ ಕೊಟ್ಟರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಮಿಲ್ಲರ್ 28 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ರಶೀದ್ ಖಾನ್ 40 ರನ್ ಗಳಿಸಿದರು.
ಡೇವಿಡ್ ಮಿಲ್ಲರ್ 8 ಬೌಂಡರಿ 6 ಸಿಕ್ಸರ್ ಸಿಡಿಸಿ ಒಟ್ಟು ಅಜೇಯ 94 ರನ್ ಗಳಿಸಿದರು.
ಗುಜರಾತ್ ತಂಡ ಇನ್ನು ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು. ಗುಜರಾತ್ 19.5 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿತು.

