ಮುಂಬೈ:ನಾಯಕ ಕೆ.ಎಲ್.ರಾಹುಲ್ ಅವರ ಶತಕದ ನೆರೆವಿನಿಂದ ಲಕ್ನೊ ತಂಡ ಮುಂಬೈ ವಿರುದ್ಧ 36 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ತಂಡ ಸತತ ಎಂಟನೆ ಸೋಲು ಕಂಡಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಲಕ್ನೊ ಪರ ಅರಂಭಿಕರಾಗಿ ಕಣಕ್ಕಿಳಿದ ರಾಹುಲ್ ಹಾಗೂ ಕ್ವಿಂಟಾನ್ ಡಿಕಾಕ್ ಉತ್ತಮ ಆರಂಭ ಕೊಡಲಿಲ್ಲ.
10 ರನ್ ಗಳಿಸಿದ್ದ ಕ್ವಿಂಟಾನ್ ಡಿಕಾಕ್ ಬುಮ್ರಾಗೆ ಬಲಿಯಾದರು. ನಂತರ ಬಂದ ಮನೀಶ್ ಪಾಂಡೆ 22, ಮಾರ್ಕಸ್ ಸ್ಟೋಯ್ನಿಸ್ 0, ಕೃಣಾಲ್ ಪಾಂಡ್ಯ 1 ರನ್ ಗಳಿಸಿದರು.
ಮತ್ತೊಂದು ಬದಿಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ರಾಹುಲ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ 61 ಎಸೆತದಲ್ಲಿ ಶತಕ ಸಿಡಿಸಿದರು. ರಾಹುಲ್ ಒಟ್ಟು 62 ಎಸೆತದಲ್ಲಿ 12 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 103 ರನ್ ಕಲೆ ಹಾಕಿದರು.
ದೀಪಕ್ ಹೂಡಾ 10, ಆಯೂಷ್ ಬಡೋನಿ 14 ರನ್ ಗಳಿಸಿದರು. ಲಕ್ನೊ ತಂಡ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
169 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ ತಂಡಕ್ಕೆ ಓಪನರ್‍ಗಳಾದ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಮೊದಲ ವಿಕೆಟ್‍ಗೆ 49 ರನ್ ಸೇರಿಸಿದರು.
ಇಶನ್ ಕಿಶನ್ 8 ರನ್ ಗಳಿಸಿ ರವಿ ಬಿಷ್ಣೊಯಿಗೆ ವಿಕೆಟ್ ಒಪಿಸಿದರು, ಡೇವಾಲ್ಡ್ ಬ್ರೇವಿಸ್ 3, ಸೂರ್ಯಕುಮಾರ್ ಯಾದವ್ 7, ರೋಹಿತ್ ಶರ್ಮಾ 39 ರನ್ ಗಳಿಸಿ ಕೃಣಾಲ್‍ಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ 38, ಕಿರಾನ್ ಪೊಲಾರ್ಡ್ 19, ಡೇನಿಯಲ್ ಸ್ಯಾಮ್ಸ್ 3, ಜಯದೇವ್ ಉನಾದ್ಕತ್ 3 ರನ್ ಪೇರಿಸಿದರು. ಮುಂಬೈ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿದೆ. ಕೃಣಾಲ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.