ಮುಂಬೈ: ಸೂರ್ಯ ಕುಮಾರ್ ಯಾದವ್ ಅವರ ಅರ್ಧ ಶತಕದ ನೆರೆವಿನಿಂದ ಅಂತೂ ಇಂತೂ ಮುಂಬೈ ಇಂಡಿಯನ್ಸ್ ಮೊದಲ ಗೆಲುವು ದಾಖಲಿಸಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ದುಕೊಂಡಿತು.ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕಲ್ ಒಳ್ಳೆಯ ಆರಂಭ ಕೊಡಲಿಲ್ಲ. ದೇವದತ್ ಪಡಿಕಲ್ 15 ರನ್ ಗಳಿಸಿ ಶೋಕಿನ್ಗೆ ವಿಕೆಟ್ ಒಪ್ಪಿಸಿದರು.
ಸಂಜು ಸ್ಯಾಮ್ಸನ್ 16, ಡ್ಯಾರಿಲ್ ಮಿಚೆಲ್ 17, ಶಿಮ್ರಾನ್ ಹೇಟ್ಮಯರ್ ಅಜೇಯ 6, ರಿಯಾನ್ ಪರಾಗ್ 3, ಆರ್.ಅಶ್ವಿನ್ 21, ಬೌಲ್ಟ್ 1 ರನ್ ಗಳಿಸಿದರು. ಏಕಾಂಗಿ ಹೋರಾಟ್ ಮಾಡಿದ ಬಟ್ಲರ್ 67 ರನ್ ಕಲೆ ಹಾಕಿದರು.
ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಮುಂಬೈ ಪರ ಹೃತಿಕ್ ಶೋಕೀನ್ ಹಾಗೂ ಇಲೆ ಮೆರ್ಡಿತ್ ತಲಾ 2 ವಿಕೆಟ್ ಪಡೆದರು.
159 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೆ ನಾಯಕ ರೋಹಿತ್ ಶರ್ಮಾ (2 ರನ್) ಹಾಗೂ ಇಶನ್ ಕಿಶನ್ (26 ರನ್) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ನಂತರ ಬಂದ ಸೂರ್ಯ ಕುಮಾರ್ ಯಾದವ್ (51 ರನ್) ಹಾಗೂ ತಿಲಕ್ ವರ್ಮಾ (35 ರನ್) ಕಿರಾನ್ ಪೋಲಾರ್ಡ್ 10, ಟಿಮ್ ಡೇವಿಡ್ 20, ಡೇನಿಯಲ್ ಸ್ಯಾಮ್ಸ್ ಅಜೇಯ 6 ರನ್ ಗಳಿಸಿದರು.
ಮುಂಬೈ 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿ ಗೆಲುವಿನ ದಡ ಸೇರಿತು. ಅರ್ಧ ಶತಕ ಸಿಡಿಸಿದ ಸೈರ್ಯ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.