ಮುಂಬೈ:ಐಪಿಎಲ್‍ನ 16ನೇ ಪಂದ್ಯದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿವೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಮಹಾ ಹೋರಾಟವನ್ನೆ ಮಾಡಲಿದೆ. ಮಯಾಂಕ್ ಅಗರ್‍ವಾಲ್ ನೇತೃತ್ವದ ಪಂಜಾಬ್ ತಂಡ ತನ್ನ ಮೊದಲ ಪಂದ್ಯದಲ್ಲಿ ಆರ್‍ಸಿಬಿ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ನಂತರ ಎರಡನೆ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋತಿತ್ತು. ಮೂರನೆ ಪಂದ್ಯದಲ್ಲಿ ಚೆನ್ನೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು.
ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಬಲಿಷ್ಠ ಲಕ್ನೊ ವಿರುದ್ಧ ಗೆದ್ದು ನಂತರ ಡೆಲ್ಲಿ ವಿರುದ್ಧವೂ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ 4 ಅಂಕಗಳೊಂದಿಗೆ ನಾಲ್ಕನೆ ಸ್ಥಾನದಲ್ಲಿದ್ದರೆ ಪಂಜಾಬ್ ತಂಡ 4 ಅಂಕಗಳೊಂದಿಗೆ ಐದನೆ ಸ್ಥಾನದಲ್ಲಿದೆ.
ಪಂಜಾಬ್ ಪರ ನಾಯಕ ಮಯಾಂಕ್ ಅಗರ್‍ವಾಲ್ ಬ್ಯಾಟಿಂಗ್‍ನಲ್ಲೂ ಮಿಂಚಬೇಕಿದೆ. ಲಂಕಾ ಬ್ಯಾಟರ್ ಭಾನುಕಾ ರಾಜಪಕ್ಸ್ ಮಿಂಚಬೇಕಿದೆ. ಲಿಯಾಮ್ ಲಿವೀಂಗ್ ಸ್ಟೋನ್ ತಂಡದ ಬ್ರಹ್ಮಾಸ್ತ್ರವಾಗಿದ್ದಾರೆ. ಅವರ ಆಲ್ರೌಂಡ್ ಪ್ರದರ್ಶನದಿಂದ ಪಂಜಾಬ್ ಗೆಲುವು ಕಂಡಿದೆ. ಕೆಳ ಕ್ರಮಾಂಕದಲ್ಲಿ ಶಾರುಖ್ ಖಾನ್, ಒಡಿಯಾನ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಮಾಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಅರ್ಷದೀಪ್ ಸಿಂಗ್, ಒಡಿಯಾನ್ ಸ್ಮಿತ್ ತಾಕತ್ತು ಪ್ರದರ್ಶಿಸಬೇಕಿದೆ.
ಇನ್ನು ಗುಜರಾತ್ ಟೈಟಾನ್ಸ್ ಪರ ಮ್ಯಾಥ್ಯು ವೇಡ್ ರನ್ ಮಳೆ ಸುರಿಸಬೇಕಿದೆ. ವಿಜಯ್ ಶಂಕರ್ ಅವರಿಂದ ನಿರೀಕ್ಷಿತಾ ಆಟ ಬಂದಿಲ್ಲ. ಡೇವಿಡ್ ಮಿಲ್ಲರ್ ಮ್ಯಾಚ್ ಫಿನೀಶರ್ ಆಗಬೇಕಿದೆ. ರಾಹುಲ್ ತೆವಾಟಿಯಾ ಹಾಗೂ ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್ ಮಾಡಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಲಾಕಿ ಫಗ್ರ್ಯುಸನ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಮೊಹ್ಮದ್ ಶಮಿ ಒಳ್ಳೆಯ ಸಾಥ್ ನೀಡುತ್ತಿದ್ದಾರೆ. ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್ ಸ್ಪಿನ್ ಮ್ಯಾಜಿಕ್ ಮಾಡಬೇಕಿದೆ.