ಮುಂಬೈ:ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಸೊಗಸಾದ ಅರ್ಧ ಶತಕದ ನೆರೆವಿನಿಂದ ಆರ್ಸಿಬಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಜಿಗಿದಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು. ಗುಜರಾತ್ ತಂಡ ಓಪನರ್ ಶುಭಮನ್ ಗಿಲ್ (1) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಮ್ಯಾಥೀವ್ ವೇಡ್ 16 ರನ್ ಗಳಿಸಿ ಮ್ಯಾಕ್ಸವೆಲ್ಗೆ ವಿಕೆಟ್ ಒಪ್ಪಿಸಿದರು. 31 ರನ್ ಗಳಿಸಿದ್ದ ವೃದ್ದಿಮಾನ್ ಸಾಹಾ ರನೌಟ್ ಆದರು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 62, ಡೇವಿಡ್ ಮಿಲ್ಲರ್ 34, ರಾಹುಲ್ ತೆವಾಟಿಯಾ 2, ರಶೀದ್ ಖಾನ್ ಅಜೇಯ 19 ರನ್ ಗಳಿಸಿದರು.
ಗುಜರಾತ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಜೋಶ್ ಹೆಜ್ಲ್ ವುಡ್ 2 ವಿಕೆಟ್ ಹಾಗೂ ಮ್ಯಾಕ್ಸ್ ವೆಲ್ ಹಾಗೂ ವನಿಂದು ಹಸರಂಗ ತಲಾ 1 ವಿಕೆಟ್ ಪಡೆದರು.
169 ರನ್ ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್ ಗೆ 115 ರನ್ ಗಳ ಭರ್ಜರಿ ಆರಂಭ ನೀಡಿದರು.
ಬೌಂಡರಿಗಳ ಸುರಿಮಳೆಗೈದ ವಿರಾಟ್ 33 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. 44 ರನ್ ಗಳಿಸಿ ಮುನ್ನಗುತ್ತಿದ್ದ ಫಾಫ್ ಡುಪ್ಲೆಸಿಸ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು.
ಮತ್ತೆ ದಾಳಿಗಿಳಿದ ರಶೀದ್ ಖಾನ್ 73 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಸ್ಟಂಪ್ ಮಾಡಿದರು. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ದಿನೇಶ್ ಕಾರ್ತಿಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ಸಿಬಿ 18.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.ಟೈಟಾನ್ಸ್ ಪರ ರಶೀದ್ ಖಾನ್ ಪರ 2 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನರಾದರು.