ರಾಜ್ಯ ರಾಜಕೀಯದಲ್ಲಿ ಸದ್ಯ ನಾಯಕತ್ವ ಬದಲಾವಣೆಯದ್ದೇ ಚರ್ಚೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನವೆಂಬರ್ ತಿಂಗಳಲ್ಲಿ ಎರಡುವರೆ ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ ಸಿಎಂ ಸ್ಥಾನ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದು ಕಡೆ ಯಾತಿಂದ್ರ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭುಗಿಲೆದ್ದಿದೆ.
ಯತೀಂದ್ರ ಅವರ ಈ ಹೇಳಿಕೆ ಕೇವಲ ವೈಯಕ್ತಿಕ ಅಭಿಪ್ರಾಯವಲ್ಲ, ಅದು ಸಿದ್ದರಾಮಯ್ಯ ಅವರ ಮನದಾಳದ ಮಾತಾಗಿರಬಹುದು ಎಂಬ ಊಹೆಗಳು ವ್ಯಕ್ತವಾಗುತ್ತಿವೆ. ವಕೀಲರಾಗಿದ್ದ ಸಿದ್ದರಾಮಯ್ಯ ಅವರು 1978ರಲ್ಲಿ ಮೈಸೂರು ತಾಲ್ಲೂಕು ಬೋರ್ಡ್ ಚುನಾವಣೆಯಿಂದ ರಾಜಕೀಯ ಪ್ರವೇಶಿಸಿದರು. ಕಳೆದ ನಾಲ್ಕು ದಶಕಗಳಲ್ಲಿ ಅವರು ಸಚಿವ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸದನದಲ್ಲಿ ಅಂಕಿ-ಅಂಶಗಳೊಂದಿಗೆ ವಾದಿಸುವ ನಿಪುಣತೆ, ಪ್ರಬಲ ಮಾತುಗಾರಿಕೆ ಮತ್ತು ಅಹಿಂದ ವರ್ಗದ ಬೆಂಬಲ ಇವುಗಳು ಸಿದ್ದರಾಮಯ್ಯ ಅವರ ಪ್ರಮುಖ ಬಲ. ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದರೂ ಅವರು ಇನ್ನೂ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ನಿವೃತ್ತಿಯ ಸಾಧ್ಯತೆ ಕಡಿಮೆ.
ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಈ ಹಿಂದೆಯೊಮ್ಮೆ ಹೇಳಿದ್ದರು. ಆದರೆ ಜನರ ತೀರ್ಮಾನವೇ ಅಂತಿಮ ಎಂದಿದ್ದರು. ಈ ಮೂಲಕ ಅವರು ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ ಎಂಬ ಸುಳಿವನ್ನು ನೀಡಿದ್ದರು. ಹಾಗಾಗಿ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ ಎಂಬುವುದು ಯಾವ ಅರ್ಥದಲ್ಲಿ ನೀಡಿರುವ ಹೇಳಿಕೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಮುಖ ಮುಖಂಡರಾಗಿದ್ದು, ಶೇಕಡಾ 25ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ತರುವ ಸಾಮರ್ಥ್ಯ ಹೊಂದಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅವರ ಪ್ರಭಾವ ಸಶಕ್ತವಾಗಿದೆ. ರಾಹುಲ್ ಗಾಂಧಿಗೂ ಸಿದ್ದರಾಮಯ್ಯ ಅವರ ವೈಚಾರಿಕ ಸ್ಪಷ್ಟತೆ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಪ್ರಸ್ತುತ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಸಕ್ರಿಯ ರಾಜಕೀಯ ಅಗತ್ಯ ಅತೀವ ಮಹತ್ವದ್ದಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ಕಣದಲ್ಲಿನ ಹೊಸ ಚರ್ಚೆಗಳಿಗೆ ತಳಹದಿ ಹಾಕಿದೆ. ಸಿದ್ದರಾಮಯ್ಯ ಅವರ ನಿವೃತ್ತಿ ಅಥವಾ ಉತ್ತರಾಧಿಕಾರಿ ಆಯ್ಕೆ ಕುರಿತ ಸದ್ಯದ ಚಟುವಟಿಕೆಗಳು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಸಮೀಕರಣವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ವರದಿ : ಲಾವಣ್ಯ ಅನಿಗೋಳ

