Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಸಿ.ಟಿ.ರವಿ, ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದ್ದು ಎಲ್ಲಾ ವಿಭಾಗಗಳು ಅವ್ಯವಸ್ಥೆಯಿಂದ ಕೂಡಿದೆ. ಡಯಾಲಿಸಿಸ್ ಚಿಕಿತ್ಸೆಗೆ ಬರುವವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ, ಔಷಧಿಗಳು ಸರಿಯಾದ ಸಮಯಕ್ಕೆ ಪೂರೈಕೆಯಾಗುತ್ತಿಲ್ಲ, ರೋಗಿಗಳಿಗೆ ಆಹಾರ ಪೂರೈಸುವವರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಕಳೆದ ಒಂದು ವಾರ ಡಯಾಲಿಸಿಸ್ ಚಿಕಿತ್ಸೆಯ ಸಮಸ್ಯೆ ಇತ್ತು ಈಗ ಯಾವುದೇ ತೊಂದರೆ ಇಲ್ಲ ಎಂಬುದನ್ನು ತಿಳಿಸಿದ್ದಾರೆ.
ಬಡರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಯೇ ಸಂಜೀವಿನಿ. ಆದರೆ ಇಲ್ಲಿ ಸೂಕ್ತ ಸಮಯಕ್ಕೆ ಔಷಧಿ ಸರಬರಾಜು ನಡೆಯುತ್ತಿಲ್ಲ, ಯೋಗ್ಯವಾದ ಸ್ಟ್ರೆಚರ್ ಲಭ್ಯವಿಲ್ಲ, ಆರೋಗ್ಯ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್ಗಳ ಕೊರತೆ ಇದೆ. ಸರಿಯಾದ ಸಮಯದಲ್ಲಿ ರಿಪೋರ್ಟ್ ದೊರೆಯುತ್ತಿಲ್ಲ, ಎಲ್ಲದಕ್ಕಿಂತ ಮುಖ್ಯವಾಗಿ ಸ್ವಚ್ಛತೆ ಮತ್ತು ಮೂಲಸೌಕರ್ಯದ ಕೊರತೆಯಿದೆ. ತಕ್ಷಣ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸಮಸ್ಯೆಗಳನ್ನು ಆರೋಗ್ಯ ಸಚಿವರ ಗಮನಕ್ಕೆ ತರುತ್ತೇನೆ.
ಮಾನ್ಯ ಮುಖ್ಯಮಂತ್ರಿಗಳೇ, ಸರ್ಕಾರಿ ಆಸ್ಪತ್ರೆಗಳಿಗೆ ಸೂಕ್ತ ಸಮಯದಲ್ಲಿ ಔಷಧಿಗಳು ಸರಬರಾಜಾಗುತ್ತಿಲ್ಲ. ರಾಜ್ಯ ಸರ್ಕಾರ ಆಸ್ಪತ್ರೆಗೆ ಔಷಧಿ ತಲುಪಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆಯೇ..? ಕಳೆದ ಹತ್ತು ತಿಂಗಳಿನಿಂದ ರಾಜ್ಯದಲ್ಲಿ ಡಯಾಲಿಸಿಸ್ ಚಿಕಿತ್ಸೆಯ ಕಾಂಟ್ರಾಕ್ಟ್ ಪಡೆದಿರುವ ನೆಪ್ರೋ ಪ್ಲಸ್ ಮೆಡಿಕಲ್ ಕೇರ್ ಸಂಸ್ಥೆಗೆ ಹಣಪಾವತಿಯಾಗಿಲ್ಲ. ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ ಎಂಬ ದೂರುಗಳು ನಿರಂತರವಾಗಿ ಕೇಳಿ ಬರುತ್ತಿವೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು. ಬಡವರ ಜೀವನದ ಜೊತೆ ಚೆಲ್ಲಾಟವಾಡಬೇಡಿ. ತಕ್ಷಣ ಈ ಸಮಸ್ಯೆಗಳತ್ತ ಗಮನಹರಿಸಿ ಎಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.




