ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಸ್ಥಗಿತಗೊಂಡಿದ್ದು, ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ರಾಮನಗರದ ಬಳಿ ಇರುವ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಆದರೆ, ರೆಸಾರ್ಟ್‌ನಲ್ಲೂ ಬಿಗ್‌ಬಾಸ್ ಶೋ ಮುಂದುವರಿದಿದ್ದು, ಸ್ಪರ್ಧಿಗಳಿಗೆ ಕಠಿಣ ನಿಯಮಗಳನ್ನು ವಿಧಿಸಲಾಗಿದೆ.
ಹಾಗಾದ್ರೆ ಬಿಗ್ ಬಾಸ್ ಮನೆ ಬಂದ್? ಅಂತ ಕೇಳೋದಾದ್ರೆ ಮಾಲಿನ್ಯ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಮನೆ ಇರುವ ಜಾಲಿವುಡ್ ಸ್ಟುಡಿಯೋವನ್ನು ಸ್ಥಳೀಯ ಅಧಿಕಾರಿಗಳು ಮುಚ್ಚಿದ್ದಾರೆ. ಇದರ ಪರಿಣಾಮವಾಗಿ, ಮನೆಯಲ್ಲಿದ್ದ ಎಲ್ಲಾ 17 ಸ್ಪರ್ಧಿಗಳನ್ನು ಸ್ಥಳಾಂತರಿಸಿ, ಈಗಲ್‌ಟನ್ ರೆಸಾರ್ಟ್‌ನಲ್ಲಿ ಇರಿಸಲಾಗುತ್ತಿದೆ.
ಹಾಗಾದ್ರೆ ರೆಸಾರ್ಟ್‌ನಲ್ಲೂ ಶೋ ಮುಂದುವರಿಯುತ್ತಾ? ಬಿಗ್‌ಬಾಸ್ ಹೌಸ್‌ನ ಹೊರಗೆ ಇದ್ದರೂ, ಸ್ಪರ್ಧಿಗಳು ಈ ಕ್ಷಣದಿಂದ ‘ರೆಸಾರ್ಟ್ ಬಿಗ್‌ಬಾಸ್’ನ ಭಾಗವಾಗಿದ್ದಾರೆ. 17 ಸ್ಪರ್ಧಿಗಳಿಗೆ 12 ಕೋಣೆಗಳನ್ನು ಒದಗಿಸಲಾಗಿದೆ. ವಾಸವಿರೋಕೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೆ, ರೆಸಾರ್ಟ್‌ನಲ್ಲೂ ಶೋನ ನಿಯಮಗಳು ಮುಂದುವರೆದಿವೆ.
ಸ್ಪರ್ಧಿಗಳ ಕೋಣೆಯಿಂದ ಟಿವಿಗಳನ್ನು ತೆಗೆಯಲಾಗಿದೆ. ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಬಿಗ್ ಬಾಸ್ ಆಯೋಜಕರು ಮತ್ತು ಸ್ಪರ್ಧಿಗಳು ಹೊರತುಪಡಿಸಿ ಯಾರೊಂದಿಗೂ ಸಂಪರ್ಕಕ್ಕೆ ಬರುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯೊಂದಿಗೆ ಮಾತುಕತೆ ಕೂಡ ನಿಷಿದ್ಧ.
ಸ್ಪರ್ಧಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದ ನಂತರ, ಬಿಗ್‌ಬಾಸ್ ಶೋ ತಂಡ ಸ್ಪರ್ಧಿಗಳೊಂದಿಗೆ ಸಭೆ ನಡೆಸಿದ್ದು, ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಶೋ ಮುಂದುವರಿಯಲಿದ್ದು, ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಸ್ಪರ್ಧಿಗಳ ಕುಟುಂಬಗಳಿಗೆ ಈ ಬದಲಾವಣೆಯ ಕುರಿತು ತಿಳಿಸಲಾಗಿದೆ. ಆಯೋಜಕರು ಮತ್ತು ಜಾಲಿವುಡ್ ಸ್ಟುಡಿಯೋನವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ.
ಒಂದೊಮ್ಮೆ ನ್ಯಾಯಾಲಯದಲ್ಲಿ ಹಿನ್ನಡೆ ಆದಲ್ಲಿ, ಹೊರ ರಾಜ್ಯದಲ್ಲಿ ರೆಡಿ ಇರುವ ಸೆಟ್ಗೆ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಸಲಿಗೆ ಆರಂಭದ ಮೂರು ಶೋಗಳು ಹೊರ ರಾಜ್ಯಗಳಲ್ಲಿಯೇ ನಡೆಸಲಾಗಿತ್ತು. ಆ ನಂತರ ಸುದೀಪ್ ಒತ್ತಾಸೆಯ ಕಾರಣಕ್ಕೆ ಕರ್ನಾಟಕದಲ್ಲಿಯೇ ಬಿಗ್‌ಬಾಸ್ ಮನೆ ನಿರ್ಮಾಣ ಆರಂಭಿಸಲಾಯ್ತು. ಈಗ ಇಲ್ಲಿ ಸಮಸ್ಯೆ ಆಗಿರುವ ಕಾರಣ ಮತ್ತೆ ಹೊರರಾಜ್ಯಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ.
ವರದಿ : ಲಾವಣ್ಯ ಅನಿಗೋಳ

