ಕರ್ನಾಟಕ ರಾಜ್ಯದ ಸೆರೆಮನೆಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ದೇಶದ ಇತರೆ ರಾಜ್ಯಗಳ ಜೈಲು ಕೈದಿಗಳಿಗಿಂತ ಹೆಚ್ಚು ಕೂಲಿ ಪಡೆಯುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಈ ದಿನಗೂಲಿ ಬಿಡುಗಡೆ ಆಗದೇ ರಾಜ್ಯದ ಕೈದಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಹಾಗೂ ವಂಚನೆ ಹೀಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಕೈದಿಗಳು ಶ್ರಮದಾನ ಮಾಡಬೇಕಾಗುತ್ತದೆ.
ಹಾಗಾದ್ರೆ ದಿನಗೂಲಿ ಎಷ್ಟು?
ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ನೀಡುವ ದಿನಗೂಲಿ ₹524 ರಿಂದ ₹663 ರವರೆಗೆ ಇದೆ. ತರಬೇತಿ ₹524 ರೂ. ಅರೆ ಕುಶಲ ₹548 ರೂ. ಕುಶಲ ₹615 ರೂ. ಹೆಚ್ಚಿನ ಕುಶಲ ₹663 ರೂ. ಅದು ಮಾತ್ರವಲ್ಲದೆ ಕುಶಲ ಪ್ರವರ್ಗದ ಕೈದಿಗಳು ಮಾಸಿಕ ₹18,000ರವರೆಗೆ ಸಂಪಾದಿಸುತ್ತಿದ್ದಾರೆ. ಇದು ದೇಶದ ಯಾವುದೇ ರಾಜ್ಯದ ಜೈಲುಗಳಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ 1288 ಕೈದಿಗಳು ರಾಜ್ಯದ ವಿವಿಧ ಜೈಲಗಳಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಹ ಇದ್ದಾರೆ. ಪ್ರಜ್ವಲ್ ಗ್ರಂಥಾಲಯದ ಸಹಾಯಕನಾಗಿದ್ದು, ಅದು ತರಬೇತಿ ಪ್ರವರ್ಗಕ್ಕೆ ಬರುತ್ತದೆ. ಆದರೆ ಕಳೆದ 2 ವರ್ಷಗಳಿಂದ ಸರ್ಕಾರ ದಿನಗೂಲಿ ಬಿಡುಗಡೆ ಮಾಡದೆ ತಡೆಹಿಡಿದಿದೆ. ಇದರಿಂದಾಗಿ ಕೈದಿಗಳಿಗೆ ಸಂಬಳ ದೊರೆಯದೆ ‘ಆರ್ಥಿಕ ಬರ’ ಉಂಟಾಗಿದೆ. ಪ್ರಸ್ತುತ ಬಾಕಿ ಇರುವ ಮೊತ್ತ ₹33 ಕೋಟಿ ರೂ. ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಈ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಕೈದಿಗಳ ಖಾತೆಗೆ ನೇರವಾಗಿ ದಿನಗೂಲಿ ಜಮೆಯಾಗುತ್ತದೆ. ಜನಧನ್ ಕಾರ್ಯಕ್ರಮದ ಮೂಲಕ ಕೈದಿಗಳಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ವಾರಕೊಮ್ಮೆ ದಿನಗೂಲಿ ಲೆಕ್ಕ ಹಾಕಿ ಕೈದಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಅಧಿಕಾರಿಗಳು ವಿವರಿಸಿದ್ದಾರೆ. ಇದು ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಕೈದಿಗಳ ದಿನಗೂಲಿ ಏರಿಕೆಯಿಂದ ಎದುರಾದ ಹೆಚ್ಚುವರಿ ವೆಚ್ಚ ಭರಿಸಲು ಸರ್ಕಾರಕ್ಕೆ ಹಣಕಾಸು ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.
ವರದಿ : ಲಾವಣ್ಯ ಅನಿಗೋಳ

