ಸದನದ ಗೌರವ ಕಾಪಾಡುವ ಹೊಣೆ ಎಲ್ಲರದ್ದಾಗಿದೆ: ವಿಪಕ್ಷ ನಾಯಕರ ಬಗ್ಗೆ ಸಿಎಂ ಅಸಮಾಧಾನ

Political News: ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದು, ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ಸರ್ಕಾರದ ಬಳಿ ರೈತರಿಗೆ ನೀಡಲು ಹಣವಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿಯವರು ಅಸತ್ಯ ಹೇಳುವುದು ಕಡಿಮೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ವೇಳೆ ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ರೈತರಿಗೆ ಪರಿಹಾರ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂಬೆಲ್ಲಾ ಸುಳ್ಳು ಹೇಳಿದ್ದಾರೆ. ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ನಷ್ಟ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟರೂ ಕೂಡ ಅವರಿಂದ ಇಲ್ಲಿಯವರೆಗೂ ಒಂದು ಪೈಸೆ ಹಣ ಬಿಡುಗಡೆಯಾಗಿಲ್ಲ. ನಾವು ₹2,245 ಕೋಟಿ ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ವಿರೋಧ ಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ, ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಸದೇ ಸದನದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಇತರರು ಮಧ್ಯೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಪಡಿಸಬಾರದು. ಸದನದ ಗೌರವ ಕಾಪಾಡುವ ಹೊಣೆ ಎಲ್ಲರದ್ದಾಗಿದೆ ಎಂದು ಸಿಎಂ ಹೇಳಿದ್ದಾರೆ.

About The Author