ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಅಚಲ ನಿರ್ಧಾರ: ಡಿ.ಕೆ.ಶಿವಕುಮಾರ್

Political News: ಬೆಳಗಾವಿಯ ಸುವರ್ಣ ಸೌಧದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪ್ರತ್ಯೇಕವಾಗಿ ಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು. ಬಳಿಕ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ರೈತರ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕ“ಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಚರ್ಚೆ ಮಾಡಿದ್ದೇವೆ. ನಾವು ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಕ್ಕರೆ ಎಂಎಸ್‌ಪಿ ಏರಿಕೆಯಾಗದೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುವುದಿಲ್ಲ. ರೈತರು ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ರೈತರಿಗೆ ತೊಂದರೆಯಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ನಾನು ಆತುರದ ತೀರ್ಮಾನ ಮಾಡುವುದಿಲ್ಲ: 29ರಂದು ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ನಾನು ಆತುರದ ತೀರ್ಮಾನ ಮಾಡುವುದಿಲ್ಲ. ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ಕೇಂದ್ರ ಸರ್ಕಾರ ಹಾಗೂ ಸಮಿತಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ನಾನು ರೈತರಿಗೆ ಮನವಿ ಮಾಡಿದ್ದೇನೆ.

ನಾವು ರೈತರ ಪರವಾಗಿರುವಾಗ ಪ್ರತಿಭಟನೆ ಯಾಕೆ? ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ, ಕೇಂದ್ರ ಸಚಿವರ ಜತೆಗೂ ಚರ್ಚಿಸುವೆ. ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡುವೆ. ನಮ್ಮ ರಾಜ್ಯದವರೆಲ್ಲ ಸೇರಿ ಒಟ್ಟಾಗಿ ತೀರ್ಮಾನ ಮಾಡಬೇಕಿದೆ. ಕಬ್ಬು ಅರೆಯಲು ಅವಕಾಶ ನೀಡಲು ರೈತರಿಗೆ ಮನವಿ: ಸಕ್ಕರೆ ಕಾರ್ಖಾನೆ ಆರಂಭ ವಿಚಾರವಾಗಿ ಮನವಿ ಮಾಡುತ್ತೇನೆ. ಕಬ್ಬು ಅರೆಯುವುದು ಆರಂಭವಾಗಲಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವುದು ಆರಂಭವಾಗಿದೆ. ನಮ್ಮ ಕಬ್ಬು ಬೆಳೆ ಮಹಾರಾಷ್ಟ್ರಕ್ಕೆ ಹೋಗುವುದಕ್ಕೆ ಅವಕಾಶ ನೀಡುವುದು ಬೇಡ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ನಾವು ಮಹಾರಾಷ್ಟ್ರ ಸಿಎಂ ಜೊತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಮಿತಿ ರಾಜ್ಯಕ್ಕೆ ಬಂದಾಗ ಅದರ ಮುಂದೆ ನಾನು ಬರುತ್ತೇನೆ, ಕಬ್ಬು ಬೆಳೆಗಾರರ ಪರವಾಗಿ ನಾನು ಮಾತನಾಡುತ್ತೇನೆ.

ಸಕ್ಕರೆ ಎಂಎಸ್‌ಪಿ ಹೆಚ್ಚಾಗುವವರೆಗೂ ನಾವು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಇದು ಆತುರ, ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರ ಅಲ್ಲ. ನಿಮ್ಮ ಧ್ವನಿ ನನ್ನ ಧ್ವನಿಯಾಗುತ್ತದೆ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನ್ನ ಹಾಗೂ ಸರ್ಕಾರದ ಪರಿಸ್ಥಿತಿ ಅರಿಯಬೇಕು. ನಾವು ನಿಮ್ಮ ಪರವಾಗಿ ವಾದ ಮಾಡಲು ಸಿದ್ಧವಿದ್ದೇವೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ.

ನಿಮ್ಮ ಹೋರಾಟಕ್ಕೆ ಗೌರವ ನೀಡಿ ನಾನೇ ನಿಮ್ಮನ್ನು ಕಿತ್ತೂರಿನಲ್ಲಿ ಭೇಟಿ ಮಾಡಿದೆ. ಅಂದು ನಾನು ಎಲ್ಲರ ಜೊತೆ ಚರ್ಚೆ ಮಾಡಿ ನಿಮ್ಮ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದೆ. ಅದರಂತೆ ಇಂದು ಸಭೆ ಕರೆದಿದ್ದೇನೆ. ಕಳೆದ ವರ್ಷ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಿ 300 ರೂ. ನೀಡಲು ತೀರ್ಮಾನಿಸಿದೆವು. ನಿಮ್ಮ ಬೇಡಿಕೆ ತಪ್ಪಿಲ್ಲ. ಡೀಸೆಲ್, ರಸಗೊಬ್ಬರ, ಕೀಟನಾಶಕ ಬೆಲೆ ಹೆಚ್ಚಾಗಿದೆ. ಸಕ್ಕರೆ ಬೆಲೆ ಏರಿಕೆಯಾಗಿಲ್ಲ. ನಾವು ರಾಜಕಾರಣ ಮಾಡಿ ಜಗಳವಾಡಿದರೆ ಪರಿಹಾರ ಸಿಗಲ್ಲ.

ರೈತರ ಬದುಕಿನ ಬಗ್ಗೆ ನನಗೆ ಅರಿವಿದೆ. ನಿಮಗೆ ಸಹಾಯ ಮಾಡಬೇಕು ಎಂದು ಜನಪ್ರತಿನಿಧಿಗಳು ಬಂದಿದ್ದಾರೆ. ಕಬ್ಬು ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿದಿದೆ. ಎಥನಾಲ್ ಉತ್ಪಾದನೆಗೆ ಕಬ್ಬು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇತ್ತ ಸಕ್ಕರೆ ಎಂಎಸ್‌ಪಿ ಏರಿಕೆಯಾದರೆ ನಾವು ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಸರ್ಕಾರದ ಹಣಕಾಸಿನ ಪರಿಸ್ಥಿತಿ ನೋಡಿ ಬೇಡಿಕೆ ಇಡಬೇಕು. ಇಂದೇ ಸಿಹಿ ಸುದ್ದಿ ನೀಡಿ ಎಂದರೆ ಎಲ್ಲಿಂದ ಹಣ ನೀಡೋಣ? ಎಂದು ಡಿ.ಕೆ.ಶಿವಕುಮಾರ್ ನೇರವಾಗಿ ಪ್ರಶ್ನಿಸಿದ್ದಾರೆ.

About The Author