Mangaluru News: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರೊಸಿಕ್ಯೂಷನ್‌ಗೆ ಅನುಮತಿ ನೀಡಿದ್ದಕ್ಕೆ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಐವಾನ್ ಡಿಸೋಜಾ, ರಾಜ್ಯಪಾಲರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು, ಬಾಂಗ್ಲಾ ದೇಶದಲ್ಲಿ ಗಲಾಟೆ ನಡೆದು, ಶೇಖ್ ಹಸೀನಾಳನ್ನು ಹೊರಹಾಕಿದ ರೀತಿ, ರಾಜ್ಯಪಾಲರನನ್ನೂ ಹೊರಹಾಕಬೇಕಾಗುತ್ತದೆ. ಶೇಖ್ ಹಸೀನಾಗಾದ ಸ್ಥಿತಿ ಮುಂದೆ ರಾಜ್ಯಪಾಲರಿಗೆ ಬರಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ರಾಜ್ಯಪಾಲರ ವಿರುದ್‌ಧ ಈ ರೀತಿ ನಾಲಿಗೆ ಹರಿಬಿಟ್ಟಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಕೂಡ ಐವಾನ್ ಡಿಸೋಜ್ ವಿರುದ್ಧ ಕಿಡಿಕಾರಿದ್ದು, ಅವರ ವಿರುದ್ಧ ಕೇಸ್ ದಾಖಲಿಸಿ, ಅರೆಸ್ಟ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಬಾಂಗ್ಲಾ ದೇಶದಲ್ಲಿ ನಡೆದಂತೆ, ಇಲ್ಲಿ ಗಲಾಟೆ ಎಬ್ಬಿಸಿ, ಹಿಂದೂ- ಮುಸ್ಲಿಂಮರ ಮಧ್ಯೆ ಜಗಳ ತರುವ ಯೋಚನೆ ಇದ್ದರೆ, ಅದನ್ನು ಇಂದೇ ಬಿಟ್ಟುಬಿಡಿ. ಅಂಥ ಯೋಚನೆ ಇದ್ದರೆ ಈಗಲೇ ಅದನ್ನು ತಲೆಯಿಂದ ತೆಗೆದು ಹಾಕಿ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಅದನ್ನೇ ಮಾಡಿಕೊಂಡು ಬಂದಿದೆ. ಆದರೆ ಈಗ ಬಿಜೆಪಿಯಿಂದ ಬಲಿಷ್ಟವಾಗಿದೆ. ಈಗ ನೀವು ಇಲ್ಲಿನ ಹಿಂದೂಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಅಲ್ಲದೇ, ಪೊಲೀಸರು ರಾಜ್ಯ ಸರ್ಕಾರದ ಮಾತು ಕೇಳದೇ, ಕಾನೂನಿನ ಪರ ಕೆಲಸ ಮಾಡಬೇಕು. ಮಂಗಳೂರಿನಲ್ಲಿ ಏನೇ ಗಲಾಟೆ ನಡೆದರೂ, ಟೈರ್ ಸುಟ್ಟು ಹಾಕುವ ಸಂಸ್ಕೃತಿ ನಮ್ಮಲ್ಲಿ ಇರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಆದರೆ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಹಾಗಾದ್ರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ವೇದವ್ಯಾಸ್ ಕಾಮತ್ ವಾಗ್ದಾಳಿ ನಡೆಸಿದ್ದಾರೆ.