Saturday, November 15, 2025

Latest Posts

ಜನ ಸುರಾಜ್ ಪಕ್ಷ ಹೀನಾಯ ಸೋಲು : ಹೃದಯಾಘಾತದಿಂದ ಅಭ್ಯರ್ಥಿ ನಿಧನ

- Advertisement -

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ವಿಪಕ್ಷಗಳು ಸಂಪೂರ್ಣ ಧೂಳಿಪಟವಾಗಿರುವ ಚಿತ್ರಣ ಸ್ಪಷ್ಟವಾಗಿದೆ. ಪ್ರಶಾಂತ್ ಕಿಶೋರ್‌ ನೇತೃತ್ವದ ಜನ ಸುರಾಜ್ ಪಕ್ಷವು ಈ ಬಾರಿ ಸಂಪೂರ್ಣ ಹೀನಾಯ ಸೋಲನ್ನು ಕಂಡಿದ್ದು, ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ವಿಫಲವಾಗಿದೆ.

ಫಲಿತಾಂಶದ ದಿನವೇ ಜನ ಸುರಾಜ್ ಪಕ್ಷದ ತರಾರಿ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ರಾಜಕೀಯ ವಲಯವನ್ನು ಬೆಚ್ಚಿಬೀಳಿಸಿದೆ. ಪಾಟ್ನಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಿಂಗ್ ಅವರಿಗೆ ಶುಕ್ರವಾರ ಸಂಜೆ ಎರಡನೇ ಹೃದಯಾಘಾತ ಉಂಟಾಗಿ ಅವರು ಅಗಲಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ತರಾರಿ ಕ್ಷೇತ್ರದಲ್ಲಿ ಅವರು ಕೇವಲ 2,271 ಮತಗಳನ್ನು ಮಾತ್ರ ಪಡೆದಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಯ ವಿಶಾಲ್ ಪ್ರಶಾಂತ್ ಜಯಗಳಿಸಿದ್ದಾರೆ.

ಅಕ್ಟೋಬರ್ 31ರಂದು ಪ್ರಚಾರದ ವೇಳೆ ಮೊದಲ ಹೃದಯಾಘಾತವಾಗುತ್ತಿದ್ದಂತೆಯೇ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಅವರು ರಾಜಕೀಯ ಕುಟುಂಬದಿಂದ ಬಂದವರಲ್ಲ, ಆದರೆ ತಮ್ಮ ಸಮುದಾಯದಲ್ಲಿ ಗೌರವಗೊಂಡ ವ್ಯಕ್ತಿಯಾಗಿದ್ದರು. ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ರಚನೆಯ ಬಳಿಕ ಅವರ ಸ್ಫೂರ್ತಿಯಿಂದಲೇ ಚುನಾವಣೆ ರಣರಂಗಕ್ಕೆ ಕಾಲಿಟ್ಟಿದ್ದರು. ಅವರ ಸಾವಿನ ಸುದ್ದಿ ತರಾರಿ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ಶೋಕದಲ್ಲಿ ಮುಳುಗಿಸಿದೆ.

ಇನ್ನೊಂದೆಡೆ, ಬಿಹಾರ ಚುನಾವಣೆಯ ಇದೀಗ ಹೊರಬರುತ್ತಿರುವ ಟ್ರೆಂಡ್‌ಗಳು ಪ್ರಶಾಂತ್ ಕಿಶೋರ್ ಅವರ ರಾಜಕೀಯ ಕನಸುಗಳಿಗೆ ದೊಡ್ಡ ಹೊಡೆತ ನೀಡಿವೆ. ನಿರುದ್ಯೋಗ, ವಲಸೆ ಮತ್ತು ಕೈಗಾರಿಕಾ ಅಭಿವೃದ್ಧಿಯ ಕೊರತೆಯಂತಹ ಮಹತ್ವದ ವಿಷಯಗಳನ್ನು ಗುರಿಯಾಗಿಸಿಕೊಂಡು ಉತ್ಸಾಹಭರಿತ ಅಭಿಯಾನ ಮಾಡಿದರೂ ಜನ ಸುರಾಜ್ ಪಕ್ಷಕ್ಕೆ ಯಾವುದೇ ಬೆಂಬಲ ದೊರಕಿಲ್ಲ. 240 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಒಂದು ಕಡೆಯೂ ಜಯ ಸಾಧಿಸಲು ಸಾಧ್ಯವಾಗಿಲ್ಲ.

ಸಮೀಕ್ಷೆಗಳಲ್ಲಿ ಜನ ಸುರಾಜ್ ಪಕ್ಷಕ್ಕೆ 5 ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಎಂದು ಊಹಿಸಲಾಗಿದ್ದರೂ, ಅವೆಲ್ಲವೂ ಹುಸಿಯಾಗಿದೆ. ಚುನಾವಣಾ ತಂತ್ರಜ್ಞನಾಗಿ ತನ್ನದೇ ಆದ ಗುರುತು ಪಡೆದಿದ್ದ ಪ್ರಶಾಂತ್ ಕಿಶೋರ್ ಈ ಬಾರಿ ತನ್ನ ಮೊದಲ ರಾಜಕೀಯ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ಸ್ಪಷ್ಟವಾಗಿದೆ. ಬಿಹಾರದ ಯುವಕರು ಮತ್ತು ವಲಸೆಯ ಸಮಸ್ಯೆಗಳನ್ನು ದೊಡ್ಡ ಹೋರಾಟದ ವಿಷಯವನ್ನಾಗಿಸಿದರೂ ಮತದಾರರಿಗೆ ಅದು ಮನವರಿಕೆಯಾಗಿ ತೋರುವಂತಿಲ್ಲ. ಈ ಬಾರಿಯ ಫಲಿತಾಂಶ ಪ್ರಶಾಂತ್ ಕಿಶೋರ್‌ಗೆ ದೊಡ್ಡ ರಾಜಕೀಯ ಸಂದೇಶವನ್ನೇ ನೀಡಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss