ಮೈಸೂರು : ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣುವುದು ನನ್ನ ಕನಸಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದ್ದಾರೆ. ಮೈಸೂರಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಭವಿಷ್ಯಕ್ಕಾಗಿ ನಿಖಿಲ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ನಿಖಿಲ್ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆಗಸ್ಟ್‌ನಲ್ಲಿ ಅವರು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಹೇಗೆ ಪಕ್ಷವನ್ನು ಮುನ್ನಡೆಸಿದರೋ, ಅದೇ ರೀತಿ ನಿಖಿಲ್ ಪಕ್ಷಕ್ಕೆ ಶಕ್ತಿ ತುಂಬುತ್ತಾರೆ ಎಂದು ಹರೀಶ್ ಗೌಡ ನಿಖಿಲ್ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡುವುದು ನಮ್ಮ ಉದ್ದೇಶವಾಗಿದೆ. ನಮ್ಮನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾವು ಜೆಡಿಎಸ್ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ. ಮುಂದೆಯೂ ಜೆಡಿಎಸ್ ನಲ್ಲೇ ಇರುತ್ತೇನೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಡೆಗೆ ಹೋಗುವ ಪ್ರಶ್ನೆಯೇ ಇಲ್ಲ. ತಮ್ಮನ್ನು ಜನರು ಜೆಡಿಎಸ್‌ನಿಂದ ಶಾಸಕನನ್ನಾಗಿ ಗೆಲ್ಲಿಸಿದ್ದಾರೆ. ಜನರ ನಂಬಿಕೆಗೆ ಎಂದಿಗೂ ದ್ರೋಹ ಮಾಡುವುದಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶಾಸಕ ಜಿ.ಟಿ. ದೇವೇಗೌಡ ಅವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹರೀಶ್ ಗೌಡ, ಈ ವಿಚಾರ ನಿಜವಾಗಿದ್ದರೂ ಅವರನ್ನು ಸಮಾಧಾನಪಡಿಸುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಿದ್ದಾರೆ. ದೇವೇಗೌಡರಿಗೆ ಪಕ್ಷದಲ್ಲಿ ಬೇಸರವಾಗಿದೆ ನಿಜ. ಈ ಬಗ್ಗೆ ನಮ್ಮ ನಾಯಕರು ಗಮನ ಹರಿಸುತ್ತಿದ್ದಾರೆ. ಇದು ತಮ್ಮ ಮನೆಯ ವೈಯಕ್ತಿಕ ವಿಚಾರ. ಆದ್ದರಿಂದ ಇದರ ಬಗ್ಗೆ ಹೆಚ್ಚು ಮಾತನಾಡಲು ಆಗುವುದಿಲ್ಲ ಎಂದು ಶಾಸಕ ಹರೀಶ್ ಗೌಡ ತಿಳಿಸಿದ್ದಾರೆ. ಹರೀಶ್ ಗೌಡ ಅವರ ಮಾತಿನಂತೆ ಮೈಸೂರು ಭಾಗದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಅಲೆ ಜೋರಾಗಿದ್ಯಾ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.