ಬೆಂಗಳೂರು: ಇಂದಿನ ಸದನ ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾಯ್ತು. ಬಿಜೆಪಿ ವಿರುದ್ಧ ಮಾತನಾಡುತ್ತಿದ್ದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಾ ಹಾಸ್ಯಭರಿತವಾಗಿ ಬಿಜೆಪಿಯ ಕಾಲೆಳೆದ್ರು.
ವಿಶ್ವಾಸಮತ ಯಾಚನೆ ಅಷ್ಟು ಸುಲಭದ ಮಾತಲ್ಲ. ನಮ್ಮ ಸರ್ಕಾರದ ಕುರಿತು ಎಲ್ಲಾ ಸದಸ್ಯರು ತಮ್ಮ ತಮ್ಮ ಚರ್ಚೆ ಮಾಡಿ ಮುಗಿಸಿದ ಬಳಿಕ ಸಂವಿಧಾನ ಬದ್ಧವಾಗಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಬೇಕು ಅಂತ ತಮ್ಮ ಮಾತು ಆರಂಭಿಸಿದ ಶಾಸಕ ಶಿವಲಿಂಗೇಗೌಡ, ಬಿಜೆಪಿಯವರು ಸರ್ಕಾರ ಪತನಮಾಡೋ ನಿಟ್ಟಿನಲ್ಲಿ ಶಾಸಕರನ್ನು ಸೆಳೆದಿರುವ ಬಗ್ಗೆ ಸದನದ ಗಮನ ಸೆಳೆದ್ರು. ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದೆ ಹೀಗಾಗಿ ಆದಷ್ಟುಬೇಗ ವಿಶ್ವಾಸಮತ ಯಾಚನೆಗೆ ಒತ್ತಾಯ ಮಾಡುತ್ತಿದ್ದಾರೆ ಅಂತ ಹೇಳಿದ್ರು.
ಇನ್ನು ಪಿಎಂ ಕೂಡ ನೀವೆ, ಮಹಾರಾಷ್ಟ್ರದಲ್ಲೂ ನೀವೆ, ದೇಶದ ಎಲ್ಲಾ ರಾಜ್ಯದಲ್ಲೂ ನೀವೆ ಇದ್ದೀರಿ. ಇದೊಂದು ರಾಜ್ಯವನ್ನು ಬಿಟ್ಟುಕೊಟ್ಟಿದ್ರೆ ನಿಮಗೇನಾಗ್ತಿತ್ತು ಅಂತ ಶಿವಲಿಂಗೇಗೌಡ ಪ್ರತಿಪಕ್ಷ ಬಿಜೆಪಿಯ ಕಾಲೆಳೆದ್ರು. ಇನ್ನು ನಿಮಗೆ ಅಧಿಕಾರಕ್ಕೇರುವ ಉದ್ದೇಶವಿದ್ರೆ ಹೋರಾಟ ಮಾಡಿ, 150 ಸೀಟ್ ಪಡೆದು ಮತ್ತೆ ಮುಂದಿನ ಬಾರಿ ನಮ್ಮ ತಪ್ಪುಗಳನ್ನು ಎತ್ತಿಹಿಡಿದು ಭಾಷಣ ಬಿಗಿದು ಮುಖ್ಯಮಂತ್ರಿಯಾದ್ರೆ ಹೇಗಿರುತ್ತೆ. ಅದುಬಿಟ್ಟು ನಮ್ಮ ಶಾಸಕರನ್ನು ಹೊತ್ತೊಯ್ದು ಬಾಂಬೆನಲ್ಲಿಟ್ಟು ಯಾಕೆ ರಾದ್ಧಾಂತ ಮಾಡಿಕೊಳ್ತೀರ, ನಿಮಗೆ ಯಾಕಿಷ್ಟು ಅಧಿಕಾರದ ಆಸೆ, ಇದನ್ನು ಭಗವಂತ ಮೆಚ್ಚಲ್ಲ ಅಂತ ಲೇವಡಿ ಮಾಡಿದ್ರು.