JDS ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಸಂಘಟಿಸಿ, ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದು JDS ಪಕ್ಷದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. ಆನೇಕಲ್ ತಾಲೂಕಿನ ಚಂದಾಪುರದ ಸೂರ್ಯ ಸಿಟಿಯಲ್ಲಿ JDS ಹಿರಿಯ ಮುಖಂಡ K.P ರಾಜು ಅವರ ಅಧ್ಯಕ್ಷತೆಯಲ್ಲಿ, ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಆಚರಣೆ ಅಂಗವಾಗಿ JDS ಕಾರ್ಯಕರ್ತರು ಹಾಗೂ ಮುಖಂಡರು ಏರ್ಪಡಿಸಿದ್ದ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದುರ್ಬಲರು ಹಾಗೂ ಹಿಂದುಳಿದ ವರ್ಗಗಳಿಗೆ ಸಹಾಯ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಹುಟ್ಟುಹಬ್ಬದ ಆಚರಣೆಯನ್ನು ಅರ್ಥಪೂರ್ಣವಾಗಿಸಬಹುದು. ಈ ರೀತಿಯ ಸೇವಾ ಕಾರ್ಯಗಳು ಬಡವರಿಗೆ ನೆರವಾಗಲಿದ್ದು, ಕಾರ್ಯಕರ್ತರ ಸೇವಾಭಾವನೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಆನೇಕಲ್ ವಿಧಾನಸಭಾ ಕ್ಷೇತ್ರದ ಬಗ್ಗೆ ನನಗೂ ಹಾಗೂ ಪಕ್ಷದ ವರಿಷ್ಠರಿಗೂ ವಿಶೇಷ ಅಭಿಮಾನ ಮತ್ತು ಗೌರವವಿದೆ. ನಮ್ಮ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಕ್ಷೇತ್ರದ ಮತದಾರರು ಅಪಾರ ಬೆಂಬಲ ನೀಡಿದ್ದಾರೆ. ಪಕ್ಷಕ್ಕಾಗಿ ಜೀವ ಕೊಡುವಂತಹ ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ. ಇದರಿಂದಾಗಿ ಈ ಕ್ಷೇತ್ರಕ್ಕೆ ಜೆಡಿಎಸ್ ವಿಶೇಷ ಮಹತ್ವ ನೀಡುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನೂ ಬಲಪಡಿಸಬೇಕಾಗಿದ್ದು, ಈ ವರ್ಷ ನಡೆಯಲಿರುವ ಗ್ರೇಟರ್ ಬೆಂಗಳೂರು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಗಮನದಲ್ಲಿಟ್ಟು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದು ಅವರು ಕರೆ ನೀಡಿದರು. ಪಕ್ಷದ ಆಕಾಂಕ್ಷಿಗಳು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ಈ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೊಟ್ಟಿಕೆರೆ ಮಂಜಣ್ಣ ಹಾಗೂ ಕೆ.ಪಿ. ರಾಜು ಅವರ ನೇತೃತ್ವದಲ್ಲಿ ಜಯಭೇರಿ ಬಾರಿಸುವ ವಿಶ್ವಾಸವಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗೆ ಎಲ್ಲರೂ ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ವರದಿ : ಲಾವಣ್ಯ ಅನಿಗೋಳ



