ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್. ರಾಜಣ್ಣ ವಜಾ ಮಾಡಿದ್ದಕ್ಕೆ, ಕೇವಲ ಮತಗಳ್ಳತನದ ಬಗ್ಗೆ ನೀಡಿದ್ದ ಹೇಳಿಕೆ ಕಾರಣವಲ್ಲ. ಬೇರೆ ಕಾರಣವೂ ಇದೆ ಅಂತೆ. ಇದನ್ನ ಸ್ವತಃ ರಾಜಣ್ಣ ಅವರೇ ಒಪ್ಪಿಕೊಂಡಿದ್ದಾರೆ. ನಾನು ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆಯೂ ಹೇಳಿದ್ದೆ. ಡಿಸಿಎಂ ಬಗ್ಗೆಯೂ ಹೇಳಿದ್ದೆ. ಸಂಪುಟದಿಂದ ವಜಾ ಮಾಡುವುದಕ್ಕೆ ಇದೆಲ್ಲಾ ಕಾರಣ ಅನಿಸುತ್ತೆ. ಹೀಗಂತ ಶಾಂಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ.
ಸಂಪುಟಕ್ಕೆ ಸೇರಿಸಿ ಅಂತಾ ನಾನು ದೆಹಲಿಗೆ ಹೋಗಿದ್ನಾ? ನನಗೇನೂ ಮಂತ್ರಿ ಸ್ಥಾನದ ಅಗತ್ಯತೆ ಏನೂ ಇಲ್ಲ. ಸಂದರ್ಭ ಬಂದಾಗ ಮತ್ತೆ ಅಧಿಕಾರ ಬಂದೇ ಬರುತ್ತದೆ. ಸತ್ಯ ಹರಿಶ್ಚಂದ್ರನಿಗೆ ಏನಾಯ್ತು. ಅಂತಿಮವಾಗಿ ಸತ್ಯಕ್ಕೆ ಜಯ ಇದ್ದೇ ಇರುತ್ತೆ. ಅಸತ್ಯ, ಅಪ್ರಮಾಣಿಕತೆಗೆ ಆಯಸ್ಸು ಇರುವುದಿಲ್ಲ. ಡಿಕೆ ಶಿವಕುಮಾರ್ ಅವ್ರು ಏನ್‌ಬೇಕಾದ್ರೂ ಹೇಳಬಹುದು. ಹೇಗೆ ಬೇಕಾದ್ರೂ ನಡೆಯಬಹುದು. ಒಬ್ಬೊಬ್ಬರಿಗೆ ಒಂದೊಂದು ಶಕ್ತಿ ಇರುತ್ತದೆ. ಅವರು ಏನು ಹೇಳಿದ್ರೂ ಅರಗಿಸಿಕೊಳ್ಳುವ ಶಕ್ತಿ ಇರುತ್ತದೆ. ಅದು ಅವರ ಸಾಮರ್ಥ್ಯ. ಎಲ್ಲವನ್ನೂ ಜನ ತೀರ್ಮಾನ ಮಾಡ್ತಾರೆ.
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಿರುವಾಗ ಬೇರೆ ಪಕ್ಷಕ್ಕೆ ನಾನೇಕೆ ಸೇರಲಿ. ಯಾವುದೇ ಪಕ್ಷವನ್ನೂ ಸೇರುವುದಿಲ್ಲ. 2004ರಲ್ಲಿ ಕಾಂಗ್ರೆಸ್ ಎಂಎಲ್‌ಸಿ ಆಗಿದ್ದೆ. ನನಗೆ ಟಿಕೆಟ್ ಕೊಡೋದನ್ನು ತಪ್ಪಿಸಿ ಉಗ್ರಪ್ಪರಿಗೆ ಕೊಟ್ರು. ಇದರ ವಿರುದ್ಧ ಪ್ರತಿಭಟನೆ ಮಾಡಿದ್ದೆ. ಇನ್ಮುಂದೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಬೇರೆ ಪಕ್ಷ ಸೇರುವ ಅವಶ್ಯಕತೆಯೂ ಇಲ್ಲ. ಹೀಗಿರುವಾಗ ಬೇರೆ ಪಕ್ಷದ ಆಫರ್ ಬಗ್ಗೆ ಮಾತಿಲ್ಲ.
ಮಠಾಧೀಶರು ಕಾಂಗ್ರೆಸ್ ಹೈಕಮಾಂಡ್ ಭೇಟಿ ಬಗ್ಗೆ ನನಗೆ ಗೊತ್ತಿಲ್ಲ. ಹೋಗೋದು, ಭೇಟಿ ಮಾಡುವುದು ಅವರ ಇಚ್ಛೆಗೆ ಒಳಪಟ್ಟದ್ದು. ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಅಂತಾ ತುಮಕೂರಿನಲ್ಲಿ ರಾಜಣ್ಣ ಹೇಳಿದ್ರು.
ತುಮಕೂರಿನ ಕ್ಯಾತ್ಸಂದ್ರದ ರಾಜಣ್ಣ ಮನೆಗೆ, 15ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭೇಟಿಯಾಗಿದ್ರು. ಕುಂಚಿಟಿಗ ಮಠ, ಬೋವಿ ಗುರುಪೀಠ, ಕನಕ ಗುರುಪೀಠ, ಮಾದಾರ ಗುರುಪೀಠ, ವಾಲ್ಮೀಕಿ ಗುರು ಪೀಠ ಸೇರಿದಂತೆ ಹಲವು ಪೀಠಗಳ ಮಠಾಧೀಶರು ಭಾಗಿಯಾಗಿದ್ರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿರುವ ಮಠಾಧೀಶರು, ರಾಜಣ್ಣರನ್ನು ಸಂಪುಟದಿಂದ ಕೈಬಿಟ್ಟಿದ್ದನ್ನು ಖಂಡಿಸಿದ್ರು. ರಾಜಣ್ಣರಿಗೆ ಮತ್ತೆ ಸಚಿವ ಸ್ಥಾನ ನೀಡುವಂತೆ, ಕಾಂಗ್ರೆಸ್ ಹೈಕಮಾಂಡಿಗೆ ಆಗ್ರಹಿಸಿದ್ರು.