ಕನ್ನಡಿಗರಿಗೆ ಮತ್ತೆ ಅವಮಾನ – ದುನಿಯಾ ವಿಜಯ್ ಭಾರಿ ಆಕ್ರೋಶ!

2025 ರ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದೆ. ಕನ್ನಡ ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅಗೌರವ ತೋರಲಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಇದನ್ನು ಖಂಡಿಸಿ ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾನ್ಯವಾಗಿ ಎರಡು ದಿನ ನಡೆಯುವ ಸೈಮಾ ಕಾರ್ಯಕ್ರಮದಲ್ಲಿ ಪ್ರತಿದಿನವೂ ಎರಡು ಭಾಷೆಗಳ ಪ್ರಶಸ್ತಿ ವಿತರಣೆಯಾಗುತ್ತದೆ. ಸೆಪ್ಟೆಂಬರ್ 5 ರಂದು ನಡೆದ ಕಾರ್ಯಕ್ರಮದಲ್ಲಿ ತೆಲುಗು ಹಾಗೂ ಕನ್ನಡ ಚಿತ್ರರಂಗದ ಪ್ರಶಸ್ತಿಗಳನ್ನು ವಿತರಿಸಲಾಯಿತು. ಆದಾಗ್ಯೂ, ಕನ್ನಡಿಗರಿಗೆ ಮತ್ತೆ ಹಿಂದುಳಿದ ಸದುಪಯೋಗ ಸಿಗದೆ, ಕಾರ್ಯಕ್ರಮದ ಕೊನೆಗೆ ಪ್ರಾಧಾನ್ಯತೆ ಇಲ್ಲದ ರೀತಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕಾರ್ಯಕ್ರಮದ ಆರಂಭದಿಂದಲೇ ತೆಲುಗು ಚಿತ್ರರಂಗದ ಕಲಾವಿದರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಅವರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮುಗಿಯುವ ವೇಳೆಗೆ ಸಮಯ ಬಹುತೇಕ ಮೀರಿ ಹೋಗಿತ್ತು. ಪರಿಣಾಮವಾಗಿ, ಬಹುತೇಕ ತೆಲುಗು ಕಲಾವಿದರು ಹಾಗೂ ಪ್ರೇಕ್ಷಕರು ಸ್ಥಳವನ್ನು ತೊರೆದರು. ನಂತರವೇ ಕನ್ನಡದ ಪ್ರಶಸ್ತಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದುನಿಯಾ ವಿಜಯ್ ಅವರಿಗೆ ಭೀಮ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಘೋಷಣೆಯಾಗಿತ್ತು. ವೇದಿಕೆಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಯಾರೂ ಇಲ್ಲದಿದ್ದಾಗ ಸ್ಟೇಜ್ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೊದು ಎಷ್ಟು ಸರಿ..? ಪ್ರತಿ ಬಾರಿ ಕನ್ನಡವನ್ನ ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರ್​​ಗಳೂ ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ? ಮುಂದಿನ ಕಾರ್ಯಕ್ರಮಗಳಲ್ಲಿ ಈ ರೀತಿ ಮರುಕಳಿಸಿದರೆ, ನಾವು ಸೈಮಾ ಕಾರ್ಯಕ್ರಮದಲ್ಲಿ ಭಾಗವಹಿಸೋದೆ ಇಲ್ಲ ಎಂದು ದುನಿಯಾ ವಿಜಯ್ ಅವ್ರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲೇ ನಟ ಸುದೀಪ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭಿಸಿದ್ದರೂ, ಅವರ ಪರವಾಗಿ ಪ್ರಶಸ್ತಿಯನ್ನು ವಿ. ನಾಗೇಂದ್ರ ಸ್ವೀಕರಿಸಿದರು. ಆ ವೇಳೆಗೆ ವೇದಿಕೆ ಮುಂಭಾಗ ಭಾಗಶಃ ಖಾಲಿಯಾಗಿತ್ತು. ಈ ದೃಶ್ಯಗಳು ಕನ್ನಡಿಗರಿಗೆ ನಡೆಸುತ್ತಿರುವ ಅಸಮಾನತೆ ಹಾಗೂ ಆಯೋಜಕಗಳ ನಿರ್ಲಕ್ಷ್ಯ ತೋರಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author