ಕನ್ನಡ ಚಿತ್ರರಂಗದ ಯುವ ಪ್ರತಿಭೆ ಕರೆನ್ ಕ್ಷಿತಿ ಸುವರ್ಣ ಈಗ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ನಮ್ಮ ಕನ್ನಡ ಸಿನಿಮಾ ರಂಗದ 22 ವರ್ಷದ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಕೇವಲ 22ನೇ ವಯಸ್ಸಿನಲ್ಲಿ 79ನೇ “ಕೇನ್ಸ್ ಚಲನಚಿತ್ರೋತ್ಸವ 2026” (Cannes Film Festival) ಕಾರ್ಯಕ್ರಮಕ್ಕೆ ಪ್ರಮುಖ ಭಾಷಣಕಾರರಾಗಿ ಆಯ್ಕೆಯಾಗಿರುವ ಮೊದಲ ಕನ್ನಡ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರೆನ್ ಅವರು ಫೋರ್ಬ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್, ಎಮ್ಮಿ ಪ್ರಶಸ್ತಿ ವಿಜೇತ ನಟಿ ಶೋಹ್ರೆ ಅಗ್ದಾಶ್ಲೂ, ನಟಿ ಟಮೆರಾ ಮೌರಿ ಹಾಗೂ USC ಅನೆನ್ಬರ್ಗ್ ಇನ್ಕ್ಲೂಷನ್ ಇನಿಶಿಯೇಟಿವ್ ಸಂಸ್ಥಾಪಕಿ ಸ್ಟೇಸಿ ಸ್ಮಿತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಮೇ 12 ಮತ್ತು 13 ರಂದು ನಡೆಯಲಿರುವ ಈ ಶೃಂಗಸಭೆಯಲ್ಲಿ ಕರೆನ್ ಅವರು ಸಿನಿಮಾ, ಕೃತಕ ಬುದ್ಧಿಮತ್ತೆ (AI) ಹಾಗೂ ಸಾಮಾಜಿಕ ಕ್ರಿಯಾಶೀಲತೆ ಕುರಿತಂತೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಜಾಗತಿಕವಾಗಿ 10 ಲಕ್ಷಕ್ಕೂ ಹೆಚ್ಚು ವೀಕ್ಷಕರಿಗೆ ಮರುಪ್ರಸಾರವಾಗಲಿದೆ. ಕರೆನ್ ನಿರ್ದೇಶನದ ಚೊಚ್ಚಲ ಹಿಂದಿ-ಕನ್ನಡ ಚಿತ್ರ ‘ಸೆಪ್ಟೆಂಬರ್ 21’ ಇದೇ ಮೇ 16, 2026 ರಂದು ಕೇನ್ಸ್‌ನ ಪಾಲೈಸ್ ಥಿಯೇಟರ್‌ನಲ್ಲಿ ನಡೆಯುವ ಮಾರ್ಷೆ ಡು ಫಿಲ್ಮ್ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ.
ಆಲ್ಜೈಮರ್ ಕಾಯಿಲೆ ಆರೈಕೆದಾರರ ಮೌನ ಹೋರಾಟವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ ಹಾಗೂ ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಅನುಮೋದನೆ ನೀಡಿದೆ. ಇದಕ್ಕೂ ಮೊದಲು ಗೋವಾದ 56ನೇ IFFIಯಲ್ಲಿ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತ್ತು. ಚಿತ್ರವು ಮೇ 22 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಮಾತನಾಡಿದ ಕರೆನ್ ಕ್ಷಿತಿ ಸುವರ್ಣ “ಕೇನ್ಸ್ ವೇದಿಕೆಯಲ್ಲಿ ಕರ್ನಾಟಕದ ಕಥೆಯನ್ನು ಹೇಳುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ಅವಿಸ್ಮರಣೀಯ. ‘ಸೆಪ್ಟೆಂಬರ್ 21’ ರಂದು ನನ್ನ ಮೊದಲ ಚಿತ್ರ ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿಯಾಗಲಿದೆ. ಪ್ರಾದೇಶಿಕ ಕಥೆಗಳು ಜಾಗತಿಕ ಮಟ್ಟದಲ್ಲಿ ಸ್ಪಂದನೆ ಮೂಡಿಸಬಹುದು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಇನ್ನಷ್ಟು ಯುವ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ,” ಎಂದು ಹೇಳಿದ್ದಾರೆ.




