ವಿಜಯಪುರ: ಕಳೆದ ಯುಗಾದಿಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದೀಗ ಮತ್ತೆ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಯಲ್ಲಿ ಸಾರಿಗೆ ಬಸ್ ಚಾಲಕ, ನಿರ್ವಾಹಕು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ವಿಜಯಪುರ ಡಿಪೋಗೆ ಸೇರಿದ್ದಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲಕ ಬಸವರಾಜ ಬಿರದಾರ್ ಅವರು, ಶ್ರೀಶೈಲ ಬಸ್ ನಿಲ್ದಾಣದ ಬಳಿ, ಬಸ್ ನಿಲ್ಲಿಸಿ, ಊಟಕ್ಕೆ ಹೋಗಿ ಬಂದು, ಅಲ್ಲಿಯೇ ಇದ್ದಂತ ಕಟ್ಟೆಯ ಮೇಲೆ ಮಲಗಿದ್ದಾರೆ. ಈ ವೇಳೆ ಏಕಾಏಕಿ ಕನ್ನಡಿಗ ಎನ್ನುವ ಕಾರಣದಿಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದಂತ ಪುಂಡರ ಗುಂಪೊಂದು, ಚಾಲಕ, ನಿರ್ವಾಹಕರ ಮೇಲೆ ನಡೆಸಿದೆ.
ಪುಂಡರು ಹಲ್ಲೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಚಾಲಕ, ನಿರ್ವಾಹಕರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಇತರರು ಸ್ಥಳಕ್ಕೆ ಆಗಮಿಸುತ್ತಿದ್ದಂತೇ, ಜನರನ್ನು ಕಂಡು ಅಲ್ಲಿಂದ ಪುಂಡರು ಪರಾರಿಯಾಗಿದ್ದಾರೆ. ಪುಂಡರ ಹಲ್ಲೆಯಿಂದಾಗಿ ಚಾಲಕನ ಮುಖ, ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ, ಸಾರಿಗೆ ಬಸ್ ಚಾಲಕ ಶ್ರೀಶೈಲ ಪೊಲೀಸ್ ಠಾಣೆಗೆ ತೆರಳಿ, ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ, ಪೊಲೀಸರು ತನಿಖೆ ಆರಂಭಿಸಿದ್ದು, ಪುಂಡರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.