ಕಾಂತಾರ ಚಾಪ್ಟರ್–1 ಸಿನಿಮಾ ದೇಶದಾದ್ಯಂತ ಭಾರೀ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಎಲ್ಲರಿಗೂ ನೆನಪಿರುವಂತೆ, ಚಿತ್ರದ ಕ್ಲೈಮ್ಯಾಕ್ಸ್ ಸೀನಿನಲ್ಲಿ ರಿಷಬ್ ಶೆಟ್ಟಿ ಅವರು ತಾಯಿ ಚಾಮುಂಡಿಯನ್ನು ಆಹ್ವಾನಿಸುವ ದೃಶ್ಯ ಪ್ರೇಕ್ಷಕರ ಮೈಯಲ್ಲಿ ನಡುಕ ಹುಟ್ಟಿಸುವಂತಿತ್ತು.
ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೈವ ಮತ್ತು ದೇವರ ವಿಷಯಗಳನ್ನು ನಾನು ಸಿನಿಮಾದಲ್ಲಷ್ಟೇ ತೋರಿಸುತ್ತೇನೆ, ಅದರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ತಾಯಿ ಚಾಮುಂಡೇಶ್ವರಿ ಮತ್ತು ದೈವದ ಆಶೀರ್ವಾದದಿಂದಲೇ ಈ ಚಿತ್ರವನ್ನು ಸಮರ್ಪಕವಾಗಿ ಮುಗಿಸಿ, ಜನರ ಹೃದಯಕ್ಕೆ ತಲುಪಿಸಲು ಸಾಧ್ಯವಾಯಿತು ಎಂದು ನಂಬುತ್ತೇನೆ. ಈ ಯಶಸ್ಸು ನನ್ನದೇ ಅಲ್ಲ ಎಲ್ಲರದ್ದೂ ಎಂದು ಸಂತೋಷ ವ್ಯಕ್ತಪಡಿಸಿದರು.
ಚಿತ್ರದ ಬಗ್ಗೆ ಕೆಲವು ದೈವ ಆರಾಧಕರು ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ, ಇಂದು ನಾನು ತಾಯಿ ಚಾಮುಂಡೇಶ್ವರಿ ಅವರ ಆಶೀರ್ವಾದ ಪಡೆದಿದ್ದೇನೆ. ನಾನು ಸ್ವತಃ ದೈವವನ್ನು ನಂಬುವವನಾಗಿರುವುದರಿಂದ, ಸಿನಿಮಾದಲ್ಲಿ ಎಲ್ಲಿಯೂ ದೈವದ ಚಿತ್ರಣ ತಪ್ಪಾಗಿ ಮೂಡದಂತೆ ಹೆಚ್ಚಿನ ಜಾಗ್ರತೆ ವಹಿಸಿದ್ದೇನೆ. ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ನಿರ್ಮಿಸಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ದೃಷ್ಟಿಕೋನವಿರುತ್ತದೆ, ಅವರಿಗೆ ಹೇಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಕಾಂತಾರದ ಮುಂದಿನ ಭಾಗದ ಬಗ್ಗೆ ಈಗ ಮಾತನಾಡುವುದಿಲ್ಲ. ಪ್ರಸ್ತುತ ನಾನು ‘ಜೈ ಹನುಮಾನ್’ ಚಿತ್ರದ ತಯಾರಿಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡ ಅವರು, ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಹೇಗೋ, ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ಅವರ ಸ್ಥಾನವೂ ಅದೇ ತರವಾಗಿದೆ. ಅಣ್ಣಾವ್ರು ಮತ್ತು ಅಮಿತಾಭ್ ಬಚ್ಚನ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಅಣ್ಣಾವ್ರ ವಿಶೇಷ ವ್ಯಕ್ತಿತ್ವದ ಕುರಿತಾಗಿ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಈ ಎಲ್ಲವೂ ಕಾಂತಾರದ ಯಶಸ್ಸಿನಿಂದ ಸಾಧ್ಯವಾಯಿತು. ಈ ಚಿತ್ರಕ್ಕೆ ನಾನು ಸದಾ ಚಿರಋಣಿ ಎಂದು ಭಾವೋದ್ರಿಕ್ತವಾಗಿ ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ