Tuesday, April 15, 2025

Latest Posts

ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ.. ಎಎಪಿ ಆಕ್ರೋಶ.!

- Advertisement -

ಕರ್ನಾಟಕ ಟಿವಿ : ಕೋವಿಡ್ 19  ಸಂದರ್ಭದಲ್ಲಿ ರಾಜ್ಯಗಳ ಆದಾಯ ಕೊರತೆಯನ್ನು ಸರಿದೂಗಿಸಲು 14 ರಾಜ್ಯಗಳಿಗೆ  6195 ಕೋಟಿ ರೂ.ಗಳನ್ನು  ನಿನ್ನೆ ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವನ್ನು ಕೈಬಿಡಲಾಗಿದೆ.ಈ ಮಲತಾಯಿ ಧೋರಣೆಯನ್ನು ರಾಜ್ಯದ ಜನ ಕ್ಷಮಿಸುವುದಿಲ್ಲವೆಂದು ಆಮ್ ಆದ್ಮಿ ಪಾರ್ಟಿ ಕೇಂದ್ರ ಸರಕಾರವನ್ನು ಎಚ್ಚರಿಸಿದೆ. ಕೇಂದ್ರ ಹಣಕಾಸು ಮಂತ್ರಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಮನೆಗೆ ಮಾರಿಯಂತೆ ನಡೆದುಕೊಳ್ಳುತ್ತಿದ್ದು, ಪ್ರತೀ ಬಾರಿಯೂ ಅನುದಾನಕ್ಕಾಗಿ, ಜಿಎಸ್‌ಟಿ ಬಾಬ್ತಿನ ಮರುಪಾವತಿಗಾಗಿ ಕಾಡಿಬೇಡಿ ಅಂಗಲಾಚುವಂತಹ ಸ್ಥಿತಿ ತಂದಿಟ್ಟಿದ್ದಾರೆ. ಇಂತಹ ಹೀನಾಯ ಸ್ಥಿತಿ ಕರ್ನಾಟಕ ರಾಜ್ಯಕ್ಕೆ ಹಿಂದೆಂದೂ ಬಂದಿರಲಿಲ್ಲ.

ಕೇಂದ್ರ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಆಂಧ್ರಪ್ರದೇಶಕ್ಕೆ 491 ಕೋಟಿ ರೂ.ಗಳು, ಹಿಮಾಚಲ ಪ್ರದೇಶಕ್ಕೆ 952 ಕೋಟಿ ರೂ.ಗಳು, ಕೇರಳಕ್ಕೆ 1276 ಕೋಟಿ ರೂ.ಗಳು ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಸಹಾಯ ಧನವನ್ನು ವಿತರಿಸಲಾಗಿದೆ.

ಈ ಹಿಂದೆ ಆದಂತಹ  ಜಲಪ್ರಳಯದಲ್ಲಿ 35 ಸಾವಿರ ಕೋಟಿ ನಷ್ಟದ ಅಂದಾಜು ಮಾಡಿದ್ದರೂ, ಸಾರ್ವಜನಿಕ ಸಭೆಯಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈ ಮುಗಿದು ಬೇಡಿಕೊಂಡರೂ, ಪ್ರಧಾನಿ ನರೇಂದ್ರ ಮೋದಿಯವರು ಕೊಂಚವೂ ಸ್ಪಂದಿಸಲಿಲ್ಲ, ನೆಪಮಾತ್ರಕ್ಕೆ ಸಹ ಕೇವಲ ಒಂದು ಸಾವಿರ ಕೋಟಿ ರೂಗಳನ್ನು ಮಾತ್ರ ಕೊಟ್ಟು ಕೈತೊಳೆದುಕೊಂಡರು.  ಕೇಂದ್ರ ಸರ್ಕಾರವು ಈಗ ಕೋರೋನ ಮಹಾ ಭೀತಿಯ ಸಂದರ್ಭದಲ್ಲಿಯೂ ಸಹ ನಯಾಪೈಸೆಯನ್ನೂ ನೀಡದೆಯೇ ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಅನ್ಯಾಯ ಮಾಡುತ್ತಿದೆ ಎಂದು ಎಎಪಿ ತಾಕೀತು ಮಾಡುತ್ತಿದೆ.

ಕಳೆದ ಸಾಲಿನ, ರಾಜ್ಯದ ಪಾಲಿನ  ಜಿ ಎಸ್ ಟಿ ಬಾಕಿ  ಮೊತ್ತವಾದ  9,500 ಕೋಟಿ ರೂಪಾಯಿಗಳನ್ನು ಸಹ ಇದುವರೆಗೂ ಬಿಡುಗಡೆ ಮಾಡಿಲ್ಲ,  ಕೇಂದ್ರದ ಈ ಅಸಹಕಾರ ರಾಜ್ಯ ಸರ್ಕಾರವನ್ನು  ಏಕಾಂಗಿಯಾಗಿಸಿದೆ. ಬಿಜೆಪಿ ಆಡಳಿತದ ರಾಜ್ಯ ಸರ್ಕಾರದ್ದೇ ಈ ಪಾಡಾದರೆ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯ ಸರಕಾರಗಳ ಪಜೀತಿ ಊಹಿಸಲೂ ಅಸಾಧ್ಯ !

26 ಕ್ಕೂ ಹೆಚ್ಚು ಬಿಜೆಪಿ ಸಂಸದರು ಹಾಗೂ ಕೇಂದ್ರ ಹಣಕಾಸು ಸಚಿವೆ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರೂ ಸಹ ಕೇಂದ್ರ ಸರ್ಕಾರವು ಪದೇ ಪದೇ ಈ ರೀತಿಯ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ತೀರಾ ಮಾರಕವಾಗಿದೆ ಎಂದು ಎಎಪಿ ಆರೋಪಿಸುತ್ತದೆ.

ಈ ಕೂಡಲೇ ಕೇಂದ್ರ ಸರಕಾರವು ಎಚ್ಚೆತ್ತುಕೊಂಡು, ಕರ್ನಾಟಕ ವಿರೋಧಿ ಹಾಗೂ ಒಕ್ಕೂಟ ವಿರೋಧಿ, ಸರ್ವಾಧಿಕಾರಿ ಮನಸ್ಥಿತಿಯನ್ನು ಬಿಟ್ಟು, ಕೋರೋನ ಮಹಾ ಭೀತಿಯ ಸಹಾಯಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರಕಾರವನ್ನು ಎಪಿಪಿ ಒತ್ತಾಯಿಸಿದೆ.  

ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss