ಕರ್ನಾಟಕ ಕಾಂಗ್ರೆಸ್ನಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ಮತ್ತೆ ಶುರುವಾಗಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟಕ್ಕೆ ಇಬ್ಬರು ಹೊಸ ಸಚಿವರನ್ನು ಸೇರಿಸಿಕೊಳ್ಳುವ ಚರ್ಚೆ ಜೋರಾಗಿ ನಡೀತಾ ಇರುವಂತದ್ದು. ಆದ್ರೆ ಈ ಎರಡು ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಲೆಕ್ಕಾಚಾರಗಳು ಕುತೂಹಲ ಮೂಡಿಸಿವೆ.
ಹೌದು, ಖಾಲಿ ಇರುವ ಎರಡು ಸಚಿವ ಸ್ಥಾನಗಳಲ್ಲಿ ಒಂದು ಮಹಿಳೆಗೆ ಹಾಗೂ ಮತ್ತೊಂದು ಹಿಂದುಳಿದ ವರ್ಗದ ನಾಯಕನಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಅದರಲ್ಲೂ ತಮ್ಮ ಆಪ್ತ ಶಾಸಕ ಬಸವರಾಜ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ಕೊಡಿಸಲು ಸಿದ್ದು ಒಲವು ತೋರಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ.
ಇನ್ನೊಂದೆಡೆ, ನಾಲ್ಕು ಬಾರಿ ಶಾಸಕರಾಗಿರುವ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಪುತ್ರ ಪ್ರಿಯಾ ಕೃಷ್ಣ ದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಿ ತಂದೆಯ ಪರವಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮಹಿಳಾ ಕೋಟಾದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದ್ದರೂ, ಈ ಹಿಂದೆ ಸಚಿವ ಸ್ಥಾನದ ಅವಕಾಶ ಕೈತಪ್ಪಿದ್ದರಿಂದ ಈ ಬಾರಿಯೂ ಅವರ ಆಯ್ಕೆ ಬಗ್ಗೆ ಅನಿಶ್ಚಿತತೆ ಇದೆ. ಲಕ್ಷ್ಮಿ ಹೆಬ್ಬಾಳ್ಕರ್, ಅನ್ನಪೂರ್ಣ ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿವೆ.
ಮತ್ತೊಂದೆಡೆ, ಮಾಜಿ ಸಚಿವ ಬಿ. ನಾಗೇಂದ್ರ ಕೂಡ ಸಂಪುಟಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲ, ಸಂಪುಟ ಪುನಾರಚನೆ ನಡೆದರೆ ಸಚಿವ ಎಚ್.ಸಿ. ಬಾಲಕೃಷ್ಣ ಅವರಿಗೆ ಕೊಕ್ ಸಿಗುತ್ತಾ ಎಂಬ ಚರ್ಚೆಯೂ ಶುರುವಾಗಿದೆ. ಒಟ್ಟಿನಲ್ಲಿ ಎರಡು ಸಚಿವ ಸ್ಥಾನಗಳಿಗೆ ಹಲವು ಆಕಾಂಕ್ಷಿಗಳು. ಜಾತಿ ಸಮೀಕರಣ, ಮಹಿಳಾ ಪ್ರಾತಿನಿಧ್ಯ ಮತ್ತು ಪಕ್ಷದ ಆಂತರಿಕ ಬಣಗಳ ನಡುವೆ ಅಂತಿಮವಾಗಿ ಯಾರಿಗೆ ಮಂತ್ರಿ ಭಾಗ್ಯ ಸಿಗಲಿದೆ ಎಂಬುದು ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ.




