Dharwad: ಮತ್ತೆ ಜೈಲು ಸೇರಿದ ಶಾಸಕ ವಿನಯ್ ಕುಲಕರ್ಣಿ – ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಮತ್ತೆ ಶಾಸಕರಿಲ್ಲದ ಸ್ಥಿತಿ!

Dharwad News: ಒಂದು ಕಡೆ ಯೋಗೀಶ್ ಗೌಡ ಕೊಲೆ ಪ್ರಕರಣದ ಕಾನೂನು ಹೋರಾಟ.. ಮತ್ತೊಂದು ಕಡೆ ಕ್ಷೇತ್ರದ ಜನರ ನಿರೀಕ್ಷೆ.. ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರುವಂತಾಗಿದೆ. ಇದರಿಂದ ಧಾರವಾಡ ಗ್ರಾಮೀಣ ಕ್ಷೇತ್ರ ಮತ್ತೊಮ್ಮೆ ಶಾಸಕರಿಲ್ಲದಂತಾಗಿದೆ. 2023ರ ಚುನಾವಣೆಯಿಂದಲೂ ಹಲವು ಬಾರಿ ಶಾಸಕರ ಅನುಪಸ್ಥಿತಿ ಎದುರಿಸುತ್ತಿರುವ ಕ್ಷೇತ್ರದ ಜನರಿಗೆ ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು? ಪದೇಪದೇ ಶಾಸಕರ ಅನುಪಸ್ಥಿತಿಯಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆಯೇ?

ಗೆಲ್ಲಿಸಿದ ಜನರ ನಿರೀಕ್ಷೆ ಒಂದು ಕಡೆಯಾದರೆ.. ನ್ಯಾಯಾಲಯದ ಆದೇಶ ಮತ್ತೊಂದು ಕಡೆ.. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರುವಂತಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ವಿನಯ್ ಕುಲಕರ್ಣಿ ಜೈಲು ಸೇರಿದ್ದು, ಇದರ ಪರಿಣಾಮ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಮ್ಮೆ ಜನಪ್ರತಿನಿಧಿಯ ಅನುಪಸ್ಥಿತಿಯ ಪ್ರಶ್ನೆ ಮುನ್ನೆಲೆಗೆ ಬಂದಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕ್ಷೇತ್ರದಲ್ಲಿ ನೇರವಾಗಿ ಓಡಾಡಲು ಸಾಧ್ಯವಾಗದಿದ್ದರೂ ಮತದಾರರು ಅವರ ಕೈ ಹಿಡಿದಿದ್ದರು. ನ್ಯಾಯಾಲಯದ ನಿರ್ಬಂಧದಿಂದ ಕ್ಷೇತ್ರಕ್ಕೆ ಪ್ರವೇಶಿಸಲು ಸಾಧ್ಯವಾಗದ ಸಂದರ್ಭದಲ್ಲಿ ಪತ್ನಿ ಶಿವಲೀಲಾ ಹಾಗೂ ಪುತ್ರಿ ವೈಶಾಲಿ ಕ್ಷೇತ್ರದಲ್ಲಿ ಓಡಾಡಿ ಚುನಾವಣಾ ಪ್ರಚಾರ ನಡೆಸಿದ್ದರು. ಜನರು ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. ಆದರೆ ಗೆಲುವಿನ ನಂತರವೂ ಕ್ಷೇತ್ರಕ್ಕೆ ನಿರಂತರವಾಗಿ ಲಭ್ಯವಾಗುವ ಶಾಸಕರ ಭಾಗ್ಯ ಮಾತ್ರ ಜನರಿಗೆ ಸಿಗದಂತಾಗಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದ್ದರಿಂದ ಜೈಲಿನಿಂದ ಹೊರಬಂದು ಶಾಸಕ ಸ್ಥಾನವನ್ನು ಮರಳಿ ನಿರ್ವಹಿಸುವಂತಾಗಿತ್ತು. ಆದರೆ ಹೈಕೋರ್ಟ್ ನೀಡಿದ್ದ ಶಿಕ್ಷೆ ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರುವಂತಾಗಿದೆ.

ವಿನಯ್ ಕುಲಕರ್ಣಿ ಅವರಿಗೆ ಕ್ಷೇತ್ರದಿಂದ ದೂರ ಉಳಿಯುವ ಪರಿಸ್ಥಿತಿ ಇದೇ ಮೊದಲೇನಲ್ಲ. 2023ರ ಚುನಾವಣೆಯ ಸಂದರ್ಭದಲ್ಲಿ ನ್ಯಾಯಾಲಯದ ನಿರ್ಬಂಧ ಎದುರಿಸಿದ್ದರು. ಚುನಾವಣೆಯಲ್ಲಿ ಗೆದ್ದ ಬಳಿಕವೂ 2025ರಲ್ಲಿ ಮತ್ತೆ ಜೈಲು ಸೇರಬೇಕಾಯಿತು. 2026ರ ಏಪ್ರಿಲ್‌ನಲ್ಲಿ ಜೀವಾವಧಿ ಶಿಕ್ಷೆಯ ಆದೇಶದ ಬಳಿಕ ಮತ್ತೊಮ್ಮೆ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿದ್ದರು. ಸುಮಾರು 117 ದಿನಗಳ ಕಾಲ ಹೊರಗಿದ್ದ ಅವರು ಇದೀಗ ಮತ್ತೆ ಜೈಲು ಸೇರಿದ್ದಾರೆ. ಹೀಗೆ ಪದೇಪದೇ ಜೈಲು ಮತ್ತು ಜಾಮೀನಿನ ಕಾನೂನು ಹೋರಾಟದ ನಡುವೆ ಕ್ಷೇತ್ರದ ಜನರಿಗೆ ಶಾಸಕರ ಲಭ್ಯತೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು, ಕುಡಿಯುವ ನೀರು, ರಸ್ತೆ, ಮೂಲಸೌಕರ್ಯ ಸೇರಿದಂತೆ ಜನರ ನಿತ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ಯಾರು? ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಶಾಸಕರ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಜವಾಬ್ದಾರಿ ಸಮರ್ಪಕವಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ಎದುರಾಗಿವೆ.

ಒಟ್ಟಿನಲ್ಲಿ ಯೋಗೀಶ್ ಗೌಡ ಕೊಲೆ ಪ್ರಕರಣದ ಕಾನೂನು ಹೋರಾಟದಲ್ಲಿ ವಿನಯ್ ಕುಲಕರ್ಣಿ ಮತ್ತೆ ಜೈಲು ಸೇರುವಂತಾಗಿದೆ. ಆದರೆ ಇದರ ರಾಜಕೀಯ ಪರಿಣಾಮ ಎದುರಿಸಬೇಕಿರುವುದು ಧಾರವಾಡ ಗ್ರಾಮೀಣ ಕ್ಷೇತ್ರದ ಜನರು. 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಅಲ್ಲಿಯವರೆಗೆ ಕ್ಷೇತ್ರದ ಜನರ ಧ್ವನಿಯಾಗುವವರು ಯಾರು? ಅಭಿವೃದ್ಧಿಯ ಜವಾಬ್ದಾರಿ ಹೊರುವವರು ಯಾರು? ಪದೇಪದೇ ಶಾಸಕರ ಅನುಪಸ್ಥಿತಿ ಎದುರಿಸುತ್ತಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಮುಂದಿನ ರಾಜಕೀಯ ಭವಿಷ್ಯವೇನು? ಎಂಬ ಪ್ರಶ್ನೆಗಳು ಈಗ ಕ್ಷೇತ್ರದ ಜನರಲ್ಲಿ ಮೂಡಿವೆ.

ಕ್ಯಾಮೆರ ಪರ್ಸನ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ

About The Author