ನವದೆಹಲಿ : ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಮಾಡಿ ರಾಜ್ಯದ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಬಳೀಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಉತ್ತರ ಪ್ರದೇಶ, ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಡಿಫೆನ್ಸ್ ಕಾರಿಡಾರ್ ಸ್ಥಾಪನೆ. ಅಲ್ಲದೆ ಮೈಸೂರು ದಸರಾ ವೇಳೆ ಏರ್‌ಶೋ ಆಯೋಜನೆ ಸೇರಿ ಹಲವು ಯೋಜನೆಗಳ ಜಾರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯಬೇಕಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಜಾರಿಗಾಗಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯ ಅಗತ್ಯವಿದೆ. ಆ ಅಗತ್ಯ ಭೂಮಿಯ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದು ಬೇಡಿಕೆ ಪಟ್ಟಿಯಲ್ಲಿ ಏನಿದೆ?
1) ದಸರಾದಲ್ಲಿ ಏರ್ ಶೋ ಆಯೋಜಿಸಲು ಅನುಮತಿ
2. ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್ ಸ್ಥಾಪಿಸಬೇಕು.
3. ರೋಟರಿ ಪ್ಲೈ ಓವರ್‌ಗೆ ಭೂಮಿ ಹಸ್ತಾಂತರಿಸಬೇಕು.
4. ಕೆಳ ಅಗ್ರಹಾರ – ಸರ್ಜಾಪುರ ರಸ್ತೆಗೆ ಭೂಮಿ ನೀಡಬೇಕು.
5. ಸುರಂಗ ಮಾರ್ಗ ನಿರ್ಮಿಸಲು 2.039ಎಕರೆ ಭೂಮಿ ನೀಡಬೇಕು.
6. ಲಿಂಕ್ ರೋಡ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಕ್ಕೆ ಅವಕಾಶ ನೀಡಿ.
7. ಡಬಲ್ ಡೆಕ್ಕರ್ ಪ್ಲೈ ಓವರ್ ನಿರ್ಮಾಣಕ್ಕೆ 0.3 ಎಕರೆ ಭೂಮಿ ನೀಡಿ.
ಇನ್ನೂ ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜನಾಥ್ ಸಿಂಗ್ ಅವರಿಗೆ ನೀಡಿರುವ ಮನವಿಯಲ್ಲಿ ಸಂಪೂರ್ಣವಾಗಿ ರಕ್ಷಣಾ ಇಲಾಖೆಯ ಸಹಕಾರವನ್ನೇ ಕೋರಲಾಗಿದೆ. ಅದರಲ್ಲಿ ಪ್ರಮುಖವಾಗಿ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಏರ್ ಶೋ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಇಲಾಖೆಯ ವತಿಯಿಂದ ಅನುಮತಿ ನೀಡಬೇಕು. ಅಲ್ಲದೆ ಉತ್ತರ ಪ್ರದೇಶ, ತಮಿಳುನಾಡಿನ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್ ಸ್ಥಾಪಿಸಬೇಕೆಂದು ಮನವಿ ಮಾಡಿದ್ದಾರೆ. ಇನ್ನೂ ಬೈಯ್ಯಪ್ಪನಹಳ್ಳಿ ರೈಲ್ವೆ ಜಂಕ್ಷನ್ ಅನ್ನು ಸಂಪರ್ಕಿಸುವ ರೋಟರಿ ಪ್ಲೈ ಓವರ್ ನಿರ್ಮಾಣ ಯೋಜನೆಗೆ ರಕ್ಷಣಾ ಇಲಾಖೆಯ ಭೂಮಿ ಬೇಕಾಗಿದೆ. ಅದಕ್ಕೆ ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ.
ಅಲ್ಲದೆ ಈಜಿಪುರ ಜಂಕ್ಷನ್ ಮೂಲಕ ಕೆಳ ಅಗ್ರಹಾರ ರಸ್ತೆ ಅಂದರೆ ಸರ್ಕಾರಿ ಆಸ್ಪತ್ರೆ ಸಮೀಪ ಹಾಗೂ ಸರ್ಜಾಪುರ ರಸ್ತೆಯನ್ನು ಸಂಪರ್ಕಿಸುವ 24 ಮೀಟರ್ ಭೂಮಿ ಅಗಲೀಕರಣಕ್ಕೆ ಯೋಜಿಸಿದೆ. ಇದಕ್ಕೆ ರಕ್ಷಣಾ ಇಲಾಖೆಯ ಭೂಮಿ ಬೇಕಾಗಿದೆ. ಹೀಗಾಗಿ ಈ ಕಾರ್ಯಕ್ಕೆ ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಬೇಕು. ಇನ್ನೂ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾವನೆಯಿದೆ. ಇದಕ್ಕಾಗಿ ಹೆಬ್ಬಾಳದ ಬಳಿ ರಕ್ಷಣಾ ಇಲಾಖೆಗೆ ಸೇರಿದ 2.039ಎಕರೆ ಭೂಮಿಯ ಅಗತ್ಯವಿದೆ. ಅಂದರೆ ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ರ್ಮಗೆ ಸೇರಿದ ಭೂಮಿ ಇದ್ದು, ಇದರ ಹಸ್ತಾಂತರಕ್ಕೆ ಅವಕಾಶ ನೀಡಬೇಕು. ಇನ್ನೂ ಮುಖ್ಯವಾಗಿ ಇದರಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರ ಕಲ್ಪಿಸಲು ಇದು ಸಾಕಷ್ಟು ಅನುಕೂಲ ನೀಡಲಿದೆ.
ಇಷ್ಟೇ ಅಲ್ಲದೆ ಏರ್‌ಪೋರ್ಟ್ ರಸ್ತೆ ಅಂದರೆ ಬಳ್ಳಾರಿ ರಸ್ತೆಯಿಂದ ಸರೋವರ ಲೇಔಟ್‌ಗೆ ಲಿಂಕ್ ರೋಡ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಸ್ತಾಂತರಕ್ಕೆ ಅನುಮತಿ ಕೊಡಬೇಕು. ಗೊರಗುಂಟೆಪಾಳ್ಯ ಬಳಿ ಮೆಟ್ರೋ ಫೇಸ್-3ಗಾಗಿ ಡಬಲ್ ಡೆಕ್ಕರ್ ಪ್ಲೈ ಓವರ್ ನಿರ್ಮಾಣಕ್ಕೆ ಅಗತ್ಯವಿರುವ 0.3 ಎಕರೆ ಭೂಮಿ ಹಸ್ತಾಂತರಕ್ಕೆ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರಕ್ಷಣಾ ಇಲಾಖೆ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.