GST ಸಂಗ್ರಹದಲ್ಲಿ ಕರ್ನಾಟಕದ ದಾಖಲೆ

ದಸರಾ ಹಬ್ಬದ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ, ಕರ್ನಾಟಕ ಹೊಸ ದಾಖಲೆ ಮಾಡಿದೆ. ಸೆಪ್ಟೆಂಬರ್​ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳವಾಗಿದ್ದು, ದಸರಾ ಹಬ್ಬದ ಖರೀದಿ ಜೋರಾಗಿ ನಡೆದಿದೆ.
ಜಿಎಸ್‌ಟಿ ದರದಲ್ಲಿ ಕಡಿತದ ಬಳಿಕ ಬೆಲೆಗಳಲ್ಲಿ ಭಾರಿ ಇಳಿಕೆ ಹಿನ್ನೆಲೆ, ಜನರು ಖರೀದಿಗೆ ಮುಂದಾಗಿದ್ದಾರೆ. ಪರಿಣಾಮ ತೆರಿಗೆ ಆದಾಯದಲ್ಲಿ ಹೆಚ್ಚಳ ಕಂಡು ಬಂದಿದೆ.

ದಾಖಲೆ GST ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯೋಜನೆಗಳು ರಾಜ್ಯದ ಖಜಾನೆಗೆ ಯಾವುದೇ ಹೆಚ್ಚುವರಿ ಭಾರ ಉಂಟು ಮಾಡಿಲ್ಲ. ಬದಲಾಗಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಬೇಡಿಕೆಯನ್ನ ಉತ್ತೇಜಿಸಿದೆ ಎಂದಿದ್ದಾರೆ.

ರಾಜ್ಯವು 14,395 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 13,080 ಕೋಟಿ ರೂಪಾಯಿಗಳು ಕರ್ನಾಟಕದಲ್ಲಿ ಸಂಗ್ರಹವಾಗಿತ್ತು. ಇದು ಕೇಂದ್ರದ gst, igst ಮತ್ತು ಸೆಸ್ ಕಡಿತದ ಬಳಿಕ 7,065 ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ಸಿಗಲಿದೆ. ಆ ಮೂಲಕ gst ಸಂಗ್ರಹಣೆಯಲ್ಲಿ ಟಾಪ್​ 5 ರಾಜ್ಯಗಳಲ್ಲಿ, ಕರ್ನಾಟಕ ಉತ್ತಮ ಸ್ಥಾನ ಪಡೆದಿದೆ.

ಶೇಕಡ 3ರಷ್ಟು ಹೆಚ್ಚಳದೊಂದಿಗೆ ಮಹಾರಾಷ್ಟ್ರದಲ್ಲಿ 32,025 ಕೋಟಿ ಹಣ ಸಂಗ್ರಹವಾಗಿದ್ರೆ, ಗುಜರಾತ್​ ಶೇಕಡ 6ರಷ್ಟು ವೃದ್ಧಿಯೊಂದಿಗೆ 12,113 ಕೋಟಿ ರೂ. ಸಂಗ್ರಹಿಸಿದೆ. ತಮಿಳುನಾಡಿನಲ್ಲಿ ಶೇಕಡ 4ರಷ್ಟು ವೃದ್ಧಿಯೊಂದಿಗೆ ₹1,588 ಕೋಟಿ, ಉತ್ತರ ಪ್ರದೇಶದಲ್ಲಿ 9,806 ಕೋಟಿ ಸಂಗ್ರಹಣೆಯೊಂದಿಗೆ ಶೇಕಡ 2ರಷ್ಟು ಹೆಚ್ಚಳವಾಗಿದೆ. ತೆಲಂಗಾಣ ಮಾತ್ರ ಕರ್ನಾಟಕದಷ್ಟೇ ಶೇಕಡ 10ರಷ್ಟು ಏರಿಕೆ ಕಂಡಿದ್ದು, 5,726 ಕೋಟಿ ಸಂಗ್ರಹಿಸಿದೆ.

ಅದರ ಮೂಲ 5,211 ಕೋಟಿ ರೂ. ಆಗಿರುವುದರಿಂದ ಟಾಪ್​-5 ರಾಜ್ಯಗಳಲ್ಲಿ ಪರಿಗಣಿಸಲಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕೇವಲ ಶೇಕಡ 2ರಷ್ಟು ಸಂಗ್ರಹ ಹೆಚ್ಚಳವಾಗಿದ್ದರೂ ಕರ್ನಾಟಕದ ಸಾಧನೆ ಉತ್ತಮವಾಗಿದೆ. ತೆರಿಗೆ ಆದಾಯದಲ್ಲಿ ಮುಂದಿನ ತಿಂಗಳ ವರದಿಯಲ್ಲೂ ಇದೇ ರೀತಿಯ ಹೆಚ್ಚಳವನ್ನ ನಿರೀಕ್ಷಿಸಲಾಗಿದೆ. ವಾಹನ, ಉಡುಪು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ವಲಯಗಳಲ್ಲಿ ಶೇಕಡ 40ರಷ್ಟು ಏರಿಕೆಯಾಗಿದೆ.

About The Author