ರಾಜ್ಯದ ಜನತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರಮುಖ ಸುದ್ದಿಯೊಂದು ಬಂದಿದೆ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಿರುವ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಸದ್ಯಕ್ಕೆ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಆಹ್ವಾನಿಸಿಲ್ಲ, ಬದಲಿಗೆ ಈಗಾಗಲೇ ಇರುವ ಕಾರ್ಡ್ಗಳಲ್ಲಿ ತಿದ್ದುಪಡಿ ಮಾಡಲು ಮಾತ್ರ ಅವಕಾಶ ನೀಡಲಾಗಿದೆ.
ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳಬಹುದು. ರೇಷನ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ಹೆಸರು ತೆಗೆದುಹಾಕುವುದು, ವಿಳಾಸ ಬದಲಾವಣೆ, ಫೋಟೋ ಹಾಗೂ ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಪ್ರಮುಖ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು.
ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಅಧಿಕೃತ ಸೈಬರ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕವೂ ಆನ್ಲೈನ್ನಲ್ಲಿ ತಿದ್ದುಪಡಿಗೆ ಅರ್ಜಿ ಹಾಕಬಹುದು.
ಅದರ ಜೊತೆಗೆ ‘ಅರ್ಜಿ ಸಲ್ಲಿಸಲು ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಪ್ರಸ್ತುತ ಇರುವ ರೇಷನ್ ಕಾರ್ಡ್, ವಿಳಾಸದ ದಾಖಲೆ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿದೆ. ಒಂದು ವೇಳೆ ಹೊಸದಾಗಿ ಪತ್ನಿ ಹೆಸರು ಸೇರಿಸುವುದಾದರೆ ಮದುವೆ ಪ್ರಮಾಣ ಪತ್ರ ಹಾಗೂ ತವರು ಮನೆಯ ರೇಷನ್ ಕಾರ್ಡ್ ಬೇಕಾಗುತ್ತದೆ. ಇನ್ನು ಆರು ವರ್ಷದೊಳಗಿನ ಮಕ್ಕಳ ಹೆಸರನ್ನು ಸೇರಿಸಲು ಜನನ ಪ್ರಮಾಣ ಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್ ಒದಗಿಸಬೇಕು. ಅಗತ್ಯ ದಾಖಲೆಗಳನ್ನು ನೀಡಿ ಸಾರ್ವಜನಿಕರು ಈ ಅವಕಾಶದ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.




