ಕನ್ನಡ ಚಿತ್ರರಂಗದ ಲೆಜೆಂಡರಿ ನಟರಾದ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಪ್ರಶಸ್ತಿ ಪ್ರಕಟಣೆಯಿಂದ ಅಭಿಮಾನಿಗಳಲ್ಲಿ ಅಪಾರ ಸಂತೋಷ ಉಂಟಾಗಿದೆ.
200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ ವಿಷ್ಣುವರ್ಧನ್ ಹಾಗೂ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ಬಿ. ಸರೋಜಾದೇವಿಯವರ ಸಾಧನೆಗೆ ಈ ಪ್ರಶಸ್ತಿ ಸೂಕ್ತವಾಗಿದೆ. ಇವರು ಇಬ್ಬರೂ ಚಿತ್ರರಂಗದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ವಿಷ್ಣು ಅಭಿಮಾನಿಗಳಿಗೆ ಸಂತೋಷ ಮುಗಿಲು ಮುಟ್ಟಿದೆ.
ಸೆಪ್ಟೆಂಬರ್ 18 ರಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಈ ಘೋಷಣೆಯು ಹೊರ ಬಂದಿದೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಹಾಗೂ ಹಿರಿಯ ನಟಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಪ್ರಶಸ್ತಿಯನ್ನು ನೀಡುವಂತೆ ಮನವಿ ಮಾಡಿದ್ದರು. ಈಗ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಶಸ್ತಿ ಪ್ರಧಾನ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ