Wednesday, November 26, 2025

Latest Posts

Karnataka TV : ಕರುನಾಡ ಸುಧಾರಕರು ಕಾರ್ಯಕ್ರಮಕ್ಕೆ ವ್ಯಾಪಕ ಪ್ರಶಂಸೆ

- Advertisement -

Bengaluru: ನಮ್ಮ ಹೆಮ್ಮೆಯ ಕರ್ನಾಟಕ ಏಕೀಕರಣಗೊಂಡು 70 ವರ್ಷಕ್ಕೆ ಕಾಲಿಟ್ಟ ಸುವರ್ಣ ಸಂದರ್ಭ ಕರ್ನಾಟಕ ಟಿವಿ ಮತ್ತು AD6 ಅಡ್ವರ್ಟೈಸಿಂಗ್ ಜಂಟಿಯಾಗಿ ಕರುನಾಡ ಸುಧಾರಕರು ಅನ್ನೋ ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸುದೀರ್ಘ 7 ದಶಕಗಳ ಕಾಲ ಕರುನಾಡು ಅಸಂಖ್ಯಾತ ಸುಧಾರಕರನ್ನ, ಸಾಧಕರನ್ನ ಕಂಡಿದೆ. ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಪದೇ ಪದೇ ಎದ್ದು ನಿಲ್ಲುವ ಸ್ವಾಭಿಮಾನಿಗಳ ಶ್ರೇಷ್ಠತೆಯನ್ನು ಸ್ಮರಿಸುವ, ಅವರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮ ಇದಾಗಿತ್ತು.

ಕನ್ನಡಮ್ಮನಿಗೆ ರಾಜ್ಯಲಕ್ಷ್ಮಿಯ ಪಟ್ಟ ಕೊಟ್ಟ ಮಯೂರ ವರ್ಮನಿಂದ ಇಲ್ಲಿಯವರೆಗೂ ತಾಯಿ ಭುವನೇಶ್ವರಿಗೆ ಅರಿಶಿಣ ಕುಂಕುಮದ ಪೂಜೆ ಮಾಡಿದ ಸಕಲರ ಸಾಧನೆಯ ಕಥೆಗಳನ್ನು ದೃಶ್ಯ ರೂಪದಲ್ಲಿ ಸ್ಮರಿಸಲಾಯಿತು.

ನಾಡಿನ ಸಮಸ್ತ ಸಾಹಿತಿಗಳು, ಹೋರಾಟಗಾರರು, ಕ್ರಾಂತಿ ವೀರರು, ವಚನಕಾರರು ಸೇರಿದಂತೆ ಪ್ರತೀ ಜಿಲ್ಲೆಯ ಪ್ರಮುಖರ ಮಾಹಿತಿಗಳ ಬೃಹತ್ ಮಾಹಿತಿ ಫಲಕಗಳನ್ನು ಪ್ರದರ್ಶಿಲಾಯಿತು. ಒಮ್ಮೆ 70 ಮಾಹಿತಿ ಫಲಕಗಳ ಮಧ್ಯೆ ನಡೆದು ಬಂದರೇ 7 ದಶಕಗಳ ಕನ್ನಡಮ್ಮನ ಮಕ್ಕಳ ಸಾಧನೆಯ ಸಿನಿಮಾವನ್ನೇ ನೋಡಿದಂತೆ ಭಾಸವಾಗುತ್ತಿತ್ತು.

ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರು ಆ ದೃಶ್ಯ ವೈಭವ ಕಂಡು ಮೂಕವಿಸ್ಮಿತರಾದರು. ಕನ್ನಡ ರಾಜ್ಯೋತ್ಸವಕ್ಕೆ, ಕನ್ನಡಮ್ಮನನ್ನ ಹೀಗೆ ಸ್ಮರಿಸಿದ ಇತ್ತೀಚಿನ ಶ್ಲಾಘನೀಯ ಹಾಗೂ ಸ್ಮರಣೀಯ ಕಾರ್ಯಕ್ರಮವಿದು. ದಶಕಗಳಿಗೊಮ್ಮೆ ಇಂಥಾ ಕಾರ್ಯಕ್ರಮ ಮಾಡೋದಕ್ಕೆ ಸಾಧ್ಯವಷ್ಟೇ ಎಂದು ಮುಕ್ತಕಂಠದಿಂದ ಹೊಗಳಿದರು.

ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಎನ್. ಚಲುವರಾಯಸ್ವಾಮಿ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ ಹಾಗೂ ಜಮೀರ್ ಅಹ್ಮದ್ ಖಾನ್ ಸಮಾರಂಭದಲ್ಲಿ ಭಾಗಿಯಾಗಿ ಸಾಧನೆಗೈದ ಸಾಧಕರ ಮಾಹಿತಿ ಫಲಕ ಹಾಗೂ ಅವರನ್ನ ಸ್ಮರಿಸಿದ ರೀತಿ ನೋಡಿದರು. ಕಾರ್ಯಕ್ರಮದ ಆಯೋಜಕರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ಮಾತುಗಳನ್ನಾಡಿದರು. ನಾದ ಬ್ರಹ್ಮ ಹಂಸಲೇಖ ನೇತೃತ್ವದಲ್ಲಿ ತಾಯಿ ಭುವನೇಶ್ವರಿಗೆ ಗಾನಪೂಜೆಗೈಯಲಾಯ್ತು.

ಇದು ಬರೀ ಕಾರ್ಯಕ್ರಮವಲ್ಲ. ದೇಸಿ ಕನ್ನಡಿಗರು ಸಂಭ್ರಮದಿಂದ ಕರುನಾಡಿನ ಸಾಧಕರನ್ನು ಬಿಗಿದಪ್ಪಿ ಗೌರವಿಸಿದ ನಾಡಿನ ಹಬ್ಬವೆಂದು ಬಣ್ಣಿಸಿದರು. ಇಂಥಾ ಕಾರ್ಯಕ್ರಮಗಳನ್ನ ಮಾಡೋದಕ್ಕೆ ಗಟ್ಟಿಗುಂಡಿಗೆ ಬೇಕು. ಆಯೋಜಕರು ಆರಂಭಿಸಿದ ನಾಡಶಿಲ್ಪಿಗಳ ನಮನ ಕಾರ್ಯಕ್ರಮ ಸರ್ಕಾರಗಳಿಗೂ ಮಾದರಿ ಎಂದರು ನಾಡಿನ ನಾದ ಸಂಸ್ಕೃತಿಯ ನಿಜಗನ್ನಡಿಗ ಹಂಸಲೇಖ ಹೇಳಿದರು.

ಕರುನಾಡ ಸುಧಾರಕರು ಕಾರ್ಯಕ್ರಮಕ್ಕೂ ಮುನ್ನ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎರಡು ಗಂಟೆಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್ ರಾಜಕೀಯವಿಲ್ಲದ ನಾಡು ಕಟ್ಟುವ ಕನಸುಗಳನ್ನು ಹಂಚಿಕೊಂಡರು.

ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್ ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಯೋಜಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇನ್ನು, ಶಾಸಕರಾದ ಟಿ.ಬಿ ಜಯಚಂದ್ರ, ಎಸ್. ಆರ್ ವಿಶ್ವನಾಥ್ ಎಂ. ಕೃಷ್ಣಪ್ಪ, ಸಿ.ಕೆ ರಾಮಮೂರ್ತಿ, ರವಿಕುಮಾರ್ ಗಣಿಗ, ಮುನಿರತ್ನ, ಬಸವರಾಜ ಶಿವಣ್ಣನವರ, ಜವರಾಯಿಗೌಡ ಭಾಗಿಯಾಗಿದ್ರು.

ಮಾಜಿ ಶಾಸಕರಾದ ಸುರೇಶ್ ಗೌಡ, ರಮೇಶ್ ಗೌಡ, ಸಿ.ಎಸ್ ನಿರಂಜನ್, ಮಾಗಡಿ ಎ. ಮಂಜುನಾಥ್, ಅಜ್ಜಂಪೀರ್ ಖಾದ್ರಿ, ಎಂಸಿ ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು, ಚಿತ್ರ ತಾರೆಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕುಸುಮಾ ಹನುಮಂತರಾಯಪ್ಪ, ಮಹಮ್ಮದ್‌ ನಲಪಾಡ್, ನಿಶಾ ಯೋಗೀಶ್ವರ್, ವಿನಯ್ ಕುಮಾರ್ ಜಿ.ಬಿ, ನಿಕೇತ್ ರಾಜ್ ಮೌರ್ಯ, ಮಂಜುನಾಥ್ ಗೌಡ, ಡಿ.ಕೆ ಮೋಹನ್ ಇನ್ನೂ ಹಲವರು ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು.

ಹೀಗೆ ಅಸಂಖ್ಯಾತ ಕನ್ನಡ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಕರುನಾಡ ಸುಧಾರಕರನ್ನ ಸ್ಮರಿಸುವ ಅಚ್ಚುಕಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಿ ಸಕಲರಿಗೂ ಆಯೋಜಕರು ಧನ್ಯವಾದ ಸಮರ್ಪಸಿದರು.

- Advertisement -

Latest Posts

Don't Miss