ಚಿನ್ನ ಪ್ರಿಯರಿಗೆ ಒಂದು ದಿನ ನೆಮ್ಮದಿ ಸಿಕ್ಕರೆ, ಮತ್ತೊಂದು ದಿನ ಬೆಲೆ ಏರಿಕೆಯ ಆಘಾತ ಎದುರಾಗುತ್ತದೆ. ಸತತ ಏರಿಕೆಯ ಬಳಿಕ ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಇಳಿಕೆ ಕಂಡುಬಂದಿದೆ. ಇದರೊಂದಿಗೆ ಬೆಳ್ಳಿ ಬೆಲೆಯೂ ಭಾರಿ ಪ್ರಮಾಣದಲ್ಲಿ ಕುಸಿದಿದೆ ಅಂತ ಹೇಳಲಾಗ್ತಿದೆ.
ವರದಿಯ ಪ್ರಕಾರ ಸೆಪ್ಟೆಂಬರ್ 21, 2026ರ ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದ್ದು, 1,55,680 ರೂಪಾಯಿಗೆ ತಲುಪಿದೆ. ಇನ್ನು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 150 ರೂಪಾಯಿ ಕಡಿಮೆಯಾಗಿ, 1,42,700 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ಮಾರುಕಟ್ಟೆ ದರ ಮುಂದುವರಿದಿದ್ದು, ಶುದ್ಧ ಚಿನ್ನದ ಗ್ರಾಂ ಬೆಲೆ 15,568 ರೂಪಾಯಿ ಇದೆ. ಇನ್ನು ಬಂಗಾರದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಬ್ಲಾಕ್ಬಸ್ಟರ್ ಇಳಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5 ಸಾವಿರ ರೂಪಾಯಿ ಕಡಿತಗೊಂಡಿದ್ದು, ಪ್ರಸ್ತುತ ಪ್ರತಿ ಕೆಜಿ ಬೆಳ್ಳಿ ಬೆಲೆ 2,50,000 ರೂಪಾಯಿಗೆ ಇಳಿದಿದೆ. ಗ್ರಾಂಗೆ 250 ರೂಪಾಯಿಯಂತೆ ಬೆಳ್ಳಿ ಮಾರಾಟವಾಗುತ್ತಿದೆ.
ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಒಟ್ಟಾರೆ ಬೆಲೆಗಳು ಮಾತ್ರ ಗಗನದಲ್ಲೇ ಮುಂದುವರಿದಿವೆ. ಮುಂಬರುವ ದಿನಗಳಲ್ಲಿ ಹಬ್ಬ ಹಾಗೂ ಮದುವೆ ಸೀಸನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಮಾರುಕಟ್ಟೆಯ ಏರಿಳಿತದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಎಂದು ಹೇಳಬಹುದು.




